ಕುಂದಾಪುರ: ತಾಯಿ ಬೈದಿದ್ದಕ್ಕೆ ಮನನೊಂದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಕುಂದಾಪುರ: ತಾಯಿ ಬೈದಿದ್ದಕ್ಕೆ ಮನನೊಂದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಕೊಲ್ಲೂರು: ತಾಯಿ ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೋರ್ವಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ  ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಬೆಳ್ಳಾಲ ಗ್ರಾಮದ ಗಂಗಮಾತಾ ನಿವಾಸಿ ಚಂದ್ರಾವತಿ ಹಾಗೂ ಪ್ರಭಾಕರ ನಾಯಕ್ ದಂಪತಿಯ ಪುತ್ರಿ ಪ್ರಮಿತಾ (18) ಎಂದು ಗುರುತಿಸಲಾಗಿದೆ.
ಈಕೆ ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ
ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು.

ಘಟನೆ ವಿವರ:
ಆ. 6 ರಂದು ಗುರುವಾರ ಬೆಳಗ್ಗೆ ಮನೆಯಲ್ಲಿ ಬಟ್ಟೆಗಳನ್ನು ಇಡುವ ವಿಚಾರವಾಗಿ ಪ್ರಮಿತಾ ಮತ್ತು ಆಕೆಯ ತಂಗಿಯ ನಡುವೆ ಜಗಳ ನಡೆದಿತ್ತು. ಇದನ್ನು ಗಮನಿಸಿದ ತಾಯಿ ಚಂದ್ರಾವತಿ ಇಬ್ಬರಿಗೂ ಬೈದು ಜಗಳವನ್ನ ಬಿಡಿಸಿದ್ದರು. ಇದರಿಂದ ಕೋಪಗೊಂಡ ಸಿಡುಕು ಸ್ವಭಾವದ ಪ್ರಮಿತಾ, ಕೊಠಡಿಗೆ ತೆರಳಿ ಒಳಗಿನಿಂದ ಬಾಗಿಲ ಚಿಲಕ ಹಾಕಿಕೊಂಡಿದ್ದಳು.

ತಾಯಿ ಕೆಲಸಕ್ಕೆ ತೆರಳಿದ ಬಳಿಕ ಬೆಳಿಗ್ಗೆ 8:30ರ ಸುಮಾರಿಗೆ ಪ್ರಮಿತಾಳ ಸಹೋದರ ತಾಯಿಗೆ ಕರೆ ಮಾಡಿ ಅಕ್ಕ ಬಾಗಿಲು ತೆಗೆಯುತ್ತಿಲ್ಲ ಮತ್ತು ಮಾತನಾಡುತ್ತಿಲ್ಲ ಎಂದು ತಿಳಿಸಿದ್ದಾನೆ. ಗಾಬರಿಗೊಂಡ ತಾಯಿ ಕೂಡಲೇ ಸಂಬಂಧಿ ವಿಘ್ನಶ್ ಎಂಬುವರಿಗೆ ಕರೆ ಮಾಡಿ ಮನೆಗೆ ತೆರಳುವಂತೆ ತಿಳಿಸಿದ್ದಾರೆ.

ತಕ್ಷಣ ವಿಘ್ನಶ್ ಮನೆಗೆ ಬಂದು ಕೊಠಡಿಯ ಹಿಂಭಾಗದ ಕಿಟಕಿಯಿಂದ ಪರಿಶೀಲಿಸಿದಾಗ ಪ್ರಮಿತಾ ಕೋಣೆಯ ಫ್ಯಾನ್‌ಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ತಾಯಿ ಚಂದ್ರಾವತಿ ಸ್ಥಳಕ್ಕಾಗಮಿಸಿ ನೋಡಿದಾಗ ಮಗಳು ಮೃತಪಟ್ಟಿರುವುದು ದೃಢಪಟ್ಟಿದೆ. ಕ್ಷಣಿಕ ಕೋಪ ವಿದ್ಯಾರ್ಥಿನಿಯ ಜೀವವನ್ನೇ ಕಸಿದುಕೊಂಡಿತು.

ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ: 4/2026, U/S 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *