ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ: ತಾಯಿ ಕುಸುಮಾವತಿ ಮನೆಗೆ ಕಲ್ಲಡ್ಕ ಪ್ರಭಾಕರ ಭಟ್ ದಿಢೀರ್ ಭೇಟಿ!

ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ: ತಾಯಿ ಕುಸುಮಾವತಿ ಮನೆಗೆ ಕಲ್ಲಡ್ಕ ಪ್ರಭಾಕರ ಭಟ್ ದಿಢೀರ್ ಭೇಟಿ!

ಬೆಳ್ತಂಗಡಿ: 13 ವರ್ಷಗಳ ಹಿಂದೆ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಧರ್ಮಸ್ಥಳದ ಪಾಂಗಾಳದಲ್ಲಿರುವ ಸೌಜನ್ಯಾ ಅವರ ತಾಯಿ ಕುಸುಮಾವತಿ ಅವರ ಮನೆಗೆ ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಬುಧವಾರ ದಿಢೀರ್ ಭೇಟಿ ನೀಡಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಸೌಜನ್ಯಾ ಅವರ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರನ್ನು ಭೇಟಿಯಾದ ಪ್ರಭಾಕರ ಭಟ್ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಸೌಜನ್ಯ ಪ್ರಕರಣದಲ್ಲಿ ಕಳೆದ 13 ವರ್ಷಗಳಿಂದ ಕುಟುಂಬ ನಡೆಸುತ್ತಿರುವ ನ್ಯಾಯದ ಹೋರಾಟ, ಪ್ರಕರಣದ ಬೆಳವಣಿಗೆಗಳು ಹಾಗೂ ಮುಂದಿನ ಹೋರಾಟದ ಕುರಿತು ಮಾತುಕತೆ ನಡೆದಿರುವ ಸಾಧ್ಯತೆ ಇದೆ.

ಸುದೀರ್ಘ ಕಾಲದಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸೌಜನ್ಯ ಕುಟುಂಬದ ಮನೆಗೆ ಪ್ರಮುಖ ಮುಖಂಡರ ಭೇಟಿ ನಡೆಯುತ್ತಿರುವುದು ಪ್ರಕರಣದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ ಪ್ರಭಾಕರ ಭಟ್ ಅವರ ದಿಢೀರ್ ಭೇಟಿ ಸಾರ್ವಜನಿಕ ವಲಯದಲ್ಲೂ ಗಮನ ಸೆಳೆದಿದೆ.

ಭೇಟಿಯ ಸಂದರ್ಭದಲ್ಲಿ ಉದ್ಯಮಿ ಸದಾನಂದ ನಾವರ, ಪುರಂದರ, ಸೌಜನ್ಯಾ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಸಹೋದರ ಮೋಹನ್ ಶೆಟ್ಟಿ ಉಜಿರೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

13 ವರ್ಷಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಸೌಜನ್ಯ ಕುಟುಂಬದ ಹೋರಾಟದ ನಡುವೆ ಪ್ರಭಾಕರ ಭಟ್ ಅವರ ಭೇಟಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *