ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತುವ ‘ಮೌಲ್ಯದ ಮುತ್ತು’ ಕೃತಿ ಲೋಕಾರ್ಪಣೆ

ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತುವ ‘ಮೌಲ್ಯದ ಮುತ್ತು’ ಕೃತಿ ಲೋಕಾರ್ಪಣೆ

ಇಳಕಲ್ಲ, ಸೆ.13: ಇಂದಿನ ಮೊಬೈಲ್‌ ಯುಗದಲ್ಲಿ ಮಕ್ಕಳಲ್ಲಿ ಕುಂದುತ್ತಿರುವ ನೈತಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಶಿಕ್ಷಕ ಹಾಗೂ ಸಾಹಿತಿ ಮುತ್ತು ಯ. ವಡ್ಡರ ಅವರು ರಚಿಸಿರುವ ‘ಮೌಲ್ಯದ ಮುತ್ತು’ ನ್ಯಾನೋ ಕಥಾ ಸಂಕಲನವನ್ನು ಭಾನುವಾರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ, ಇಳಕಲ್ಲಿನಲ್ಲಿ ಪರಮಪೂಜ್ಯ ಶ್ರೀ ಡಾ. ಗುರು ಮಹಾಂತ ಮಹಾಸ್ವಾಮೀಜಿಗಳು ಬಿಡುಗಡೆಗೊಳಿಸಿದರು.

ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಆಶಯದೊಂದಿಗೆ ರಚಿಸಲಾಗಿರುವ ಈ ಕೃತಿಯಲ್ಲಿ 100ಕ್ಕೂ ಅಧಿಕ ನ್ಯಾನೋ ಕಥೆಗಳು ಒಳಪಟ್ಟಿವೆ.

ಮೊಬೈಲ್‌ ಹಾಗೂ ಡಿಜಿಟಲ್‌ ಸಾಧನಗಳ ಬಳಕೆಯೇ ಮಕ್ಕಳ ದಿನನಿತ್ಯದ ಬದುಕಿನ ಪ್ರಮುಖ ಭಾಗವಾಗುತ್ತಿರುವ ಸಂದರ್ಭದಲ್ಲಿ, ಅವರಿಗೆ ಮೌಲ್ಯಾಧಾರಿತ ಚಿಂತನೆ ಮತ್ತು ಜೀವನದ ಪಾಠಗಳನ್ನು ಸರಳವಾಗಿ ತಲುಪಿಸುವ ಪ್ರಯತ್ನವಾಗಿ ಈ ಕೃತಿ ರೂಪುಗೊಂಡಿದೆ.
ಕೃತಿಗೆ ಮುಳಗುಂದದ ಶ್ರೀಮತಿ ಸಾವಿತ್ರಿ ಎಫ್. ಬಾತಾಖಾನಿ ಅವರು ಮುನ್ನುಡಿ ಬರೆದಿದ್ದು, ಧಾರವಾಡದ ಗಾಯಕ ಶ್ರೀ ಮೆಹಬೂಬ್ ಸಾಬ್ ಅವರು ಬೆನ್ನುಡಿ ಬರೆದಿದ್ದಾರೆ.

ಬಾಗಲಕೋಟೆಯ ಯುವ ಕವಯತ್ರಿ ಕು. ಜ್ಯೋತಿ ಆನಂದ ಚಂದುಕರ ಅವರು ಆಶಯ ನುಡಿ ನೀಡಿದ್ದು, ಚಿತ್ರದುರ್ಗದ ಕರುನಾಡ ಕಲ್ಪವೃಕ್ಷ ಪ್ರಕಾಶನದ ಶ್ರೀ ಕನಕ ಪ್ರೀತೀಶ್ ಅವರು ಪ್ರಕಾಶಕರ ನುಡಿ ಬರೆದಿದ್ದಾರೆ.
ಕೃತಿಯ ಲೇಖಕ ಮುತ್ತು ಯ. ವಡ್ಡರ ಅವರು ಕಥೆ, ಕವನ ಹಾಗೂ ಲೇಖನ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಈ ಹಿಂದೆ ‘ಅತಿ ಸರಳ ಗಣಿತ’, ‘ಎಲೆಮರೆ ಕಾಯಿಗಳು’, ‘ಸನ್ಮಾರ್ಗದ ದುಂಬಿ’, ‘ಬದಲಾಗು ನೀ ಬೆಳಕಾಗು ನೀ’ ಕೃತಿಗಳನ್ನು ರಚಿಸಿದ್ದಾರೆ. ‘ಮೌಲ್ಯದ ಮುತ್ತು’ ಅವರ ಐದನೇ ಕೃತಿಯಾಗಿದ್ದು, ಮಕ್ಕಳ ಸಾಹಿತ್ಯ ಹಾಗೂ ಸ್ಪೂರ್ತಿದಾಯಕ ಕಥೆ, ಕವನ ಮತ್ತು ಲೇಖನಗಳ ರಚನೆಯಲ್ಲಿ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ.
ಕೃತಿ ಬಿಡುಗಡೆ ಸಮಾರಂಭದಲ್ಲಿ ಡಾ. ಬಸವಾನಂದ ಮಹಾಸ್ವಾಮೀಜಿಗಳು (ಧಾರವಾಡ), ಸಾಹಿತಿ ಹಾಗೂ ಶಿಕ್ಷಕ ಹೆಚ್.ಎಸ್. ಗೌಡರ, ಮಹದೇವಪ್ಪ ಬಂಗಾರಿ, ಉಪನ್ಯಾಸಕರು, ಲೇಖಕ ಮುತ್ತು ಯ. ವಡ್ಡರ, ಶ್ರೀಮತಿ ಗಂಗಾ ಮುತ್ತು ವಡ್ಡರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳಿಗೆ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಬದುಕಿನ ಮೌಲ್ಯಗಳು, ಮಾನವೀಯತೆ ಮತ್ತು ಸನ್ಮಾರ್ಗದ ಅರಿವು ಮೂಡಿಸುವ ಅಗತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ‘ಮೌಲ್ಯದ ಮುತ್ತು’ ಕೃತಿ ಮಹತ್ವ ಪಡೆದುಕೊಂಡಿದೆ.

Leave a Reply

Your email address will not be published. Required fields are marked *