ಉಡುಪಿ: ಯಶ್ಪಾಲ್ ಸುವರ್ಣ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ; ರಾವಣ ಕಟೌಟ್ಗೆ ಮೊಟ್ಟೆ ಎಸೆದು ಪ್ರತಿಕೃತಿ ದಹನ

ಉಡುಪಿ, ಜು. 31: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಗಾಂಧಿ ಕುಟುಂಬದ ವಿರುದ್ಧ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ದ್ವೇಷಪೂರಿತ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಉಡುಪಿ ಜಿಲ್ಲೆಯ ಹತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಶಾಸಕರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು “ರೌಡಿ ಶಾಸಕ” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಯಶ್ಪಾಲ್ ಸುವರ್ಣರನ್ನು ಸಂಕೇತಿಸುವ “ರಾವಣ” ಕಟೌಟ್ಗೆ ಮೊಟ್ಟೆ ಎಸೆದು ಪ್ರತಿಕೃತಿ ದಹನ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಿಕೇತ್ ರಾಜ್ ಮೌರ್ಯ, “ನಾವು ಗಾಂಧೀಜಿಯವರ ಸಿದ್ಧಾಂತಗಳನ್ನು ನಂಬುವವರು. ಪ್ರೀತಿ, ಸಹಬಾಳ್ವೆ ಮತ್ತು ಸೌಹಾರ್ದವೇ ನಮ್ಮ ರಾಜಕೀಯದ ಮೌಲ್ಯಗಳು. ದ್ವೇಷದ ರಾಜಕಾರಣಕ್ಕೆ ಈ ದೇಶದಲ್ಲಿ ಸ್ಥಾನವಿಲ್ಲ. ಯಶ್ಪಾಲ್ ಸುವರ್ಣ ಅವರಿಗೆ ದೇವರು ಸನ್ಮತಿ ನೀಡಲಿ” ಎಂದು ಹೇಳಿದರು.
“ಗಾಂಧಿ ಕುಟುಂಬ ದೇಶಕ್ಕಾಗಿ ಅಪಾರ ತ್ಯಾಗ ಮಾಡಿದೆ. ಅಂತಹ ಕುಟುಂಬದ ವಿರುದ್ಧ ವೈಯಕ್ತಿಕ ನಿಂದನೆ ಮಾಡುವುದು ಖಂಡನೀಯ. ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಾಮಾನ್ಯ ಜನರಲ್ಲಿ ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಕಂಡು ಬಿಜೆಪಿ ನಾಯಕರಲ್ಲಿ ಆತಂಕ ಮೂಡಿದೆ. ರಾಹುಲ್ ಗಾಂಧಿ ಪ್ರಜಾಪ್ರಭುತ್ವ ಮತ್ತು ಜನರ ಧ್ವನಿಯಾಗಿ ಹೊರಹೊಮ್ಮಿದ್ದಾರೆ” ಎಂದು ಅವರು ಹೇಳಿದರು.
“ರಾಮಮಂದಿರದ ಹೆಸರಿನಲ್ಲಿ ರಾಜಕೀಯ ಮಾಡುವವರು, ಅದರ ಹುಂಡಿ ದುರ್ಬಳಕೆ ಆರೋಪಗಳಿಗೆ ಉತ್ತರ ನೀಡಬೇಕು. ನಾವು ಪ್ರಧಾನಿ ನರೇಂದ್ರ ಮೋದಿಯವರ ಕುಟುಂಬದ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಆದರೆ, ರಾಹುಲ್ ಗಾಂಧಿಯವರ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಬಿಜೆಪಿ ಸಂಸ್ಕೃತಿಯನ್ನು ಬಯಲಿಗೆಳೆಯುತ್ತದೆ” ಎಂದು ನಿಕೇತ್ ರಾಜ್ ಮೌರ್ಯ ಆರೋಪಿಸಿದರು.

ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ, “ಶಾಸಕರೇ, ಮೊದಲು ನಿಮ್ಮ ದೇಹಭಾಷೆ ಹಾಗೂ ಮಾತಿನ ಶೈಲಿಯನ್ನು ಸರಿಪಡಿಸಿಕೊಳ್ಳಿ. ಜನಪ್ರತಿನಿಧಿಯಾಗಿ ರಾಜಕೀಯ ಭಾಷೆಗೆ ಒಂದು ಘನತೆ ಇರಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ ಯಾತ್ರೆ’ ನಡೆಸಿ ದೇಶದ ಏಕತೆಗೆ ಸಂದೇಶ ನೀಡಿದ ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ನಿಂದಿಸುವುದು ಶಾಸಕ ಸ್ಥಾನದಲ್ಲಿರುವವರಿಗೆ ಶೋಭೆಯಲ್ಲ” ಎಂದು ಹೇಳಿದರು.




ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮುರಳಿ ಎ ಶೆಟ್ಟಿ ಇಂದ್ರಾಳಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ತಿಮ್ಮ ಪೂಜಾರಿ, ಪ್ರಾಸದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಪ್ರಶಾಂತ್ ಜತ್ತನ್ನ, ಶುಭದ್ ರಾವ್, ಶರ್ಫುದ್ದೀನ್ ಶೇಖ್, ಸುನಿಲ್ ಬಂಗೇರ, ಅಮೃತ್ ಶೆಣೈ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಣ್ಣಯ್ಯ ಶೇರಿಗಾರ್, ಮೀನಾಕ್ಷಿ ಮಾಧವ ಬನ್ನಂಜೆ, ಡಾ. ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಮಲ್ಲಿಕಾ ಪೂಜಾರಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್ನ ಪ್ರಮುಖ ನಾಯಕರು ಹಾಗೂ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.
