ಕುಂದಾಪುರ: ಹಣಕಾಸು ವೈಷಮ್ಯಕ್ಕೆ ಸ್ನೇಹಿತನ ಗುಂಡಿಗೆ ಬಲಿಯಾದ ರೌಡಿಶೀಟರ್ ಐವನ್

ಕುಂದಾಪುರ: ಹಣಕಾಸು ವೈಷಮ್ಯಕ್ಕೆ ಸ್ನೇಹಿತನ ಗುಂಡಿಗೆ ಬಲಿಯಾದ ರೌಡಿಶೀಟರ್ ಐವನ್


ಕುಂದಾಪುರ: ಕುಂದಾಪುರದ ಹೋಲಿ ರೋಸರಿ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ನಡೆದ ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಣಕಾಸು ದ್ವೇಷವೇ ಕಾರಣ ಎನ್ನುವ ಮಾಹಿತಿ ತಿಳಿದುಬಂದಿದೆ. ಅಲ್ಲದೆ, ಕುಂದಾಪುರದ ಡೆರಿಕ್ ಎನ್ನುವ ಸ್ನೇಹಿತನೇ ತೀರಾ ಹತ್ತಿರದಿಂದ ಸೊಂಟದ ಕೆಳಗೆ ಶೂಟ್ ಮಾಡಿ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಉಡುಪಿ ಎಸ್ಪಿ ಹರಿರಾಮ್ ಶಂಕರ್, ಗುರುವಾರ ರಾತ್ರಿ ಸುಮಾರು 11.45ರಿಂದ ಮುಂಜಾನೆಯ ವರೆಗೆ ಕುಂದಾಪುರ ಮೂಲದ ಡೆರಿಕ್ ಹಾಗೂ ಬಾರ್ಕೂರು ಮೂಲದ ಐವನ್ ನಡುವೆ 3 ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್‌ನಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಧೈರ್ಯವಿದ್ದರೆ ಕುಂದಾಪುರಕ್ಕೆ ಬಾ, ಇಲ್ಲೇ ಸೆಟಲ್ ಮಾಡೋಣ ಎಂದು ಡೆರಿಕ್ ಐವಾನ್‌ಗೆ ಸವಾಲು ಹಾಕಿದ್ದ. ಚಾಲೆಂಜ್ ಸ್ವೀಕರಿಸಿದ ಐವಾನ್ ತನ್ನ ಕಾರಿನಲ್ಲಿ ಆಗಮಿಸಿ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರು ನಿಲ್ಲಿಸಿದ್ದರು.

ಐವನ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತನ್ನ ಕಾರಿನಲ್ಲಿ ಬಂದಿಳಿದ ಆರೋಪಿ ಡೆರಿಕ್, ಏಕಾಏಕಿ ಪಿಸ್ತೂಲ್ ತೆಗೆದು ಐವಾನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದಾಗಿ ಐವಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಡೆರಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.

ಘಟನೆ ಸಂಬಂಧ ಕುಂದಾಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮಣಿಪಾಲದ ಫೊರೆನ್ಸಿಕ್ ವಿಭಾಗಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಸ್ಥಳದಲ್ಲಿ ವಿಧಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿ ಡೆರಿಕ್ ಬಂಧನಕ್ಕೆ ಮೂರು ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಎಸ್ಪಿ ಹರಿರಾಮ್ ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಮೃತ ಐವನ್ ರಿಚರ್ಡ್ ಉಡುಪಿ ನಗರ ಠಾಣೆಯಲ್ಲಿ ರೌಡಿಶೀಟ‌ರ್ ಆಗಿದ್ದು ಈ ಹಿಂದೆ ಪಿಟ್ಟಿ ನಾಗೇಶ್‌ ಕೊಲೆಯಲ್ಲಿ ಆರೋಪಿಯಾಗಿದ್ದ. ಇದೀಗ ಹಣಕಾಸು ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ.

Leave a Reply

Your email address will not be published. Required fields are marked *