ಮಾನವೀಯ ಸೇವೆಗೆ ಸೌಹಾರ್ದದ ಸ್ಪರ್ಶ: ಸಾಸ್ತಾನದಲ್ಲಿ ಉಚಿತ ಅಂಬುಲೆನ್ಸ್ ಲೋಕಾರ್ಪಣೆ

ಮಾನವೀಯ ಸೇವೆಗೆ ಸೌಹಾರ್ದದ ಸ್ಪರ್ಶ: ಸಾಸ್ತಾನದಲ್ಲಿ ಉಚಿತ ಅಂಬುಲೆನ್ಸ್ ಲೋಕಾರ್ಪಣೆ


ಸಾಸ್ತಾನ: ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆ ಮಾನವೀಯ ಸೇವೆಯ ಮಹತ್ವದ ಹೆಜ್ಜೆಯಾಗಿ ಸಾಸ್ತಾನ ಸುತ್ತಮುತ್ತಲಿನ ಜನರ ತುರ್ತು ಆರೋಗ್ಯ ಸೇವೆಗೆ ನೆರವಾಗುವ ‘ಸೌಹಾರ್ದ ಅಂಬುಲೆನ್ಸ್’ ಅನ್ನು A2Z Scrap ಸಾಸ್ತಾನ ಹಾಗೂ ಸೌಹಾರ್ದ ಟ್ರಸ್ಟ್‌ ಸಹಭಾಗಿತ್ವದಲ್ಲಿ ಶಿವರಾಂ ಶೆಟ್ಟಿ ಆದರ್ಶ ಐಸ್ ಪ್ಲಾಂಟ್ ಕಾಂಪೌಂಡ್ ಸಾಸ್ತಾನ ಪಾಂಡೇಶ್ವರದಲ್ಲಿ ಆಗಸ್ಟ್ 15ರಂದು
ಲೋಕಾರ್ಪಣೆಗೊಳಿಸಲಾಯಿತು.

ಸಾಸ್ತಾನ ಗುಂಡ್ಮಿ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಮೈದು ಕುಟ್ಟಿ, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಜಗದೀಶ್ ಕಾರಂತ, ನಿವೃತ್ತ ಸರ್ವೆ ಸೂಪರ್‌ವೈಸರ್ ರಾಮಕೃಷ್ಣ ಚಡಗ ಹಾಗೂ ನಿವೃತ್ತ ಪಿಎಸ್‌ಐ ಬಿ.ಕೆ. ಬಿಜೂರು ಧ್ವಜಾರೋಹಣ ನೆರವೇರಿಸಿದರು.

ವಿದ್ವಾನ್ ವಿಜಯ ಮಂಜರ್, ಕೋಟೇಶ್ವರ ಧರ್ಮಗುರು ಅಸ್ಸಯ್ಯದ್ ಜಾಫರ್ ತಂಙಳ್ ಹಾಗೂ ಸಾಸ್ತಾನ ಸೈಂಟ್ ಅಂತೋನಿ ಚರ್ಚ್ ಧರ್ಮಗುರು ಫಾದರ್ ಸುನಿಲ್ ಡಿಸಿಲ್ವಾ ಅವರು ಅಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿದರು.

ದಿವಂಗತ ಮೋಸೆಸ್ ರಾಡ್ರಿಗಸ್ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಶೆಟ್ಟಿ ವಹಿಸಿದ್ದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೇತನಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ್ ಮಾಸ್ಟರ್ ಎಲ್ಲಿ ಸೌಹಾರ್ದ ಇರುತ್ತದೆಯೋ ಅಲ್ಲಿ ಶಾಂತಿ ಇರುತ್ತದೆ, ಶಾಂತಿ ಇರುವಲ್ಲಿ ಅಭಿವೃದ್ಧಿ ಸಾಧ್ಯ. ಪ್ರೀತಿ, ಮಮತೆ, ಸಹನೆ, ತಾಳ್ಮೆ, ಸಹಕಾರ ಹಾಗೂ ಪರಸ್ಪರ ಗೌರವದ ಮನೋಭಾವದಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ ಎಂದರು.
ಸೌಹಾರ್ದ ಟ್ರಸ್ಟ್‌ನ ರಜಾಕ್ ಹಾಗೂ ಅಲ್ತಾಫ್ ಅವರು ಉತ್ತಮ ತಂಡವನ್ನು ಕಟ್ಟಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇದೀಗ ಸಾಸ್ತಾನ ಸುತ್ತಮುತ್ತಲಿನ ಜನರ ತುರ್ತು ಆರೋಗ್ಯ ಸೇವೆಗೆ ಉಚಿತ ಅಂಬುಲೆನ್ಸ್‌ನ್ನು ಸಮರ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.

ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ಒಳಿತನ್ನು ಮಾಡಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರು ಶಾಶ್ವತವಾಗಿ ಉಳಿದಿರುವಂತೆ, ಸಮಾಜಕ್ಕಾಗಿ ಉತ್ತಮ ಕಾರ್ಯಗಳನ್ನು ಮಾಡುವವರ ಹೆಸರೂ ಶಾಶ್ವತವಾಗಿ ಉಳಿಯುತ್ತದೆ. ಯುವಜನತೆ ದೇಶದ ಶಕ್ತಿಯಾಗಿದ್ದು, ಅವರು ಸಮಾಜಮುಖಿ ಕಾರ್ಯಗಳಿಗೆ ಮುಂದಾಗಬೇಕು ಹಾಗೂ ದೇಶವನ್ನು ಪ್ರೀತಿಸಬೇಕು ಎಂದು ಕರೆ ನೀಡಿದರು.

ಜೋಸೆಫ್ ಇಲಿಯಸ್ ಮೆನೇಜಸ್ ಮಾತನಾಡಿ, ಉತ್ತಮ ಯೋಚನೆ ಹಾಗೂ ಮಾನವೀಯ ಕಾಳಜಿಯಿಂದ ತಮ್ಮ ದುಡಿಮೆಯ ಹಣದೊಂದಿಗೆ ದಾನಿಗಳ ಸಹಕಾರ ಪಡೆದು ಜೀವ ಉಳಿಸುವ ಉದ್ದೇಶದಿಂದ ರಜಾಕ್ ಹಾಗೂ ಅಲ್ತಾಫ್ ಅವರು ಉಚಿತ ಅಂಬುಲೆನ್ಸ್ ಸೇವೆಯನ್ನು ಸಮಾಜಕ್ಕೆ ಸಮರ್ಪಿಸಿರುವುದು ಮಹತ್ವದ ಕಾರ್ಯ ಎಂದರು.

ಸಾಸ್ತಾನ ಸರ್ಕಾರಿ ಆಸ್ಪತ್ರೆಯ ವೈದ್ಯ ರಾಘವೇಂದ್ರ ರಾವ್ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ತಕ್ಷಣದ ಸಾರಿಗೆ ವ್ಯವಸ್ಥೆ ಅತ್ಯಂತ ಅಗತ್ಯವಾಗಿದ್ದು, ಸಾಸ್ತಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಉಚಿತ ಅಂಬುಲೆನ್ಸ್ ಸೇವೆ ನಿಜಕ್ಕೂ ವರದಾನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮ ಪೂಜಾರಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಶಂಕರ್ ಕುಂದರ್, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ದಾನಿಗಳಾದ ಆದಿಲ್ ಸಾಲಿಗ್ರಾಮ, ಮಹೇಶ್ ಆಸ್ಪತ್ರೆಯ ಡಾ. ರಾಕೇಶ್ ಅಡಿಗ, ಸಾಸ್ತಾನ ಹೆಲ್ತ್ ಕೇರ್‌ನ ಡಾ. ಹೇಮಂತ್ ಕುಮಾರ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ್ ಹಾರಾಡಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಪಿಎಸ್‌ಐ ಬಿ.ಕೆ. ಬಿಜೂರು ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು, ಸಮಾಜ ಸೇವಕ ಈಶ್ವರ್ ಮಲ್ಪೆ  ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಸದಾನಂದ ಅವರು ಸನ್ಮಾನಿತರನ್ನು ಪರಿಚಯಿಸಿದರು.

ಟ್ರಸ್ಟ್ ಮುಖ್ಯಸ್ಥರಾದ ರಜಾಕ್ ಹಾಗೂ ಅಲ್ತಾಫ್ ಮತ್ತು ಉಪಾಧ್ಯಕ್ಷ ರವಿ ಅತಿಥಿಗಳನ್ನು ಸ್ವಾಗತಿಸಿದರು.
ಕೇಶವ ಆಚಾರ್ಯ ಪ್ರಾರ್ಥಿಸಿದರು. ಟ್ರಸ್ಟ್ ಗೌರವಾಧ್ಯಕ್ಷ ರಜಾಕ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸದಾನಂದ ಬಾಳ್ಳುದ್ರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *