ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸ್ವಾತಂತ್ರ್ಯ ಸಂಭ್ರಮ: ಗ್ರಾಮೀಣ ವಿದ್ಯಾರ್ಥಿಗಳಿಗೂ ಜಾಗತಿಕ ಶಿಕ್ಷಣದ ಅವಕಾಶ: ಸುಜ್ಞಾನ ಸಂಸ್ಥೆಯ ಕಾರ್ಯ ಶ್ಲಾಘನೀಯ – ಹಿರಿಯ ವಕೀಲ ಕೆ. ದಿವಾಕರ್

ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸ್ವಾತಂತ್ರ್ಯ ಸಂಭ್ರಮ: ಗ್ರಾಮೀಣ ವಿದ್ಯಾರ್ಥಿಗಳಿಗೂ ಜಾಗತಿಕ ಶಿಕ್ಷಣದ ಅವಕಾಶ: ಸುಜ್ಞಾನ ಸಂಸ್ಥೆಯ ಕಾರ್ಯ ಶ್ಲಾಘನೀಯ – ಹಿರಿಯ ವಕೀಲ ಕೆ. ದಿವಾಕರ್


ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಜಾಗತಿಕ ಮಟ್ಟದ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವಂತಾಗಬೇಕು. ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಪರಿಸರಕ್ಕೂ ತಲುಪಿಸುವ ನಿಟ್ಟಿನಲ್ಲಿ ಸುಜ್ಞಾನ ಸಂಸ್ಥೆ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿಯವರ ಮಾಜಿ ಕಾನೂನು ಸಲಹೆಗಾರ ಹಾಗೂ ಹಿರಿಯ ವಕೀಲ ಕೆ. ದಿವಾಕರ್ ಹೇಳಿದರು.


ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ನಡೆದ ಭಾರತದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಅವರು, 21ನೇ ಶತಮಾನವು ತೀವ್ರ ಸ್ಪರ್ಧೆಯ ಯುಗವಾಗಿದ್ದು, ವಿದ್ಯಾರ್ಥಿಗಳನ್ನು ಜಾಗತಿಕ ಸವಾಲುಗಳಿಗೆ ಸಜ್ಜುಗೊಳಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದರು.


ಆದಿ ಶಂಕರಾಚಾರ್ಯರ ಪರಂಪರೆ ಹಾಗೂ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಆಶೀರ್ವಾದದೊಂದಿಗೆ ಆರಂಭಗೊಂಡಿರುವ ಸಂಸ್ಥೆಯು ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ತಳಹದಿಯನ್ನು ಹೊಂದಿದೆ. ಊಟಿ, ಕೊಡೈಕೆನಾಲ್‌ನಂತಹ ಪ್ರಸಿದ್ಧ ಬೋರ್ಡಿಂಗ್ ಶಾಲೆಗಳ ಪರಿಸರಕ್ಕೆ ಪರ್ಯಾಯವೆನ್ನುವಂತೆ ಹಸಿರು ಪರಿಸರದಲ್ಲಿ ಅತ್ಯುತ್ತಮ ‘ಓಝೋನ್ ಕ್ಯಾಂಪಸ್’ ನಿರ್ಮಿಸಿರುವುದು ಸಂಸ್ಥೆಯ ವಿಶೇಷತೆ ಎಂದು ಅವರು ಶ್ಲಾಘಿಸಿದರು.
ಶಿಕ್ಷಣದೊಂದಿಗೆ ಸಮಗ್ರ ಬೆಳವಣಿಗೆ ಅಗತ್ಯ
ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಂಡು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವಂತೆ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭಗೊಂಡ ಸುದೀರ್ಘ ಹೋರಾಟ ಮತ್ತು ಅಸಂಖ್ಯಾತ ತ್ಯಾಗಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೂ ಪ್ರತಿಯೊಬ್ಬರ ಮತಕ್ಕೂ ಸಮಾನ ಮೌಲ್ಯವಿರುವುದು ಸಂವಿಧಾನದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.


ಭಾರತ ಇಂದು ಬಾಹ್ಯಾಕಾಶ, ರಕ್ಷಣಾ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದೆ. ಚಂದ್ರಯಾನ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು ಹಾಗೂ ದೇಶದ ರಕ್ಷಣಾ ಸಾಮರ್ಥ್ಯವು ಭಾರತದ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಇಂಜಿನಿಯರಿಂಗ್‌ನಂತಹ ವೃತ್ತಿಪರ ಶಿಕ್ಷಣದ ಜೊತೆಗೆ ಕೃಷಿ ಸಂಶೋಧನೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಸೇರಿದಂತೆ ಮೂಲ ವಿಜ್ಞಾನ ಕ್ಷೇತ್ರಗಳತ್ತಲೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ದಿವಾಕರ್ ಸಲಹೆ ನೀಡಿದರು.


ಒಂದು ಶಿಕ್ಷಣ ಸಂಸ್ಥೆಯ ನಿಜವಾದ ಆಸ್ತಿ ಉತ್ತಮ ಶಿಕ್ಷಕರು. ನೈಸರ್ಗಿಕ ಪರಿಸರದಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅವಕಾಶ ಕಲ್ಪಿಸುತ್ತಿರುವ ಸುಜ್ಞಾನ ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸಿ ವೃತ್ತಿಪರ ಶಿಕ್ಷಣ ಸಂಸ್ಥೆಯಾಗಿ, ವಿಶ್ವವಿದ್ಯಾಲಯ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು.

 

ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *