ಬೀಜಾಡಿ: ದೇವಸ್ಥಾನದ ಗಂಟೆ ಕಳವು – ಪ್ರಶ್ನಿಸಿದ ಯುವಕನ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನ!

ಬೀಜಾಡಿ: ದೇವಸ್ಥಾನದ ಗಂಟೆ ಕಳವು – ಪ್ರಶ್ನಿಸಿದ ಯುವಕನ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನ!


ಕುಂದಾಪುರ: ದೇವಸ್ಥಾನದ ಗಂಟೆ ಕಳವು ಮಾಡುತ್ತಿದ್ದುದನ್ನು ಪ್ರಶ್ನಿಸಿದ ಯುವಕನ ಮೇಲೆಯೇ ಕಾರು ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.

ಬೀಜಾಡಿ ಗ್ರಾಮದ ನಿವಾಸಿ ಗಣೇಶ (31) ಅವರು ಆಗಸ್ಟ್ 16ರಂದು ಬೆಳಗಿನ ಜಾವ ಸುಮಾರು 2 ಗಂಟೆಗೆ ಮನೆಯಲ್ಲಿದ್ದಾಗ ಸಮೀಪದ ನಂದಿಕೇಶ್ವರ ದೇವಸ್ಥಾನದ ಗಂಟೆಯ ಶಬ್ದ ಕೇಳಿಸಿದೆ. ಅನುಮಾನಗೊಂಡು ಮನೆಯಿಂದ ಹೊರಬಂದು ಪರಿಶೀಲಿಸಿದಾಗ ದೇವಸ್ಥಾನದ ಬಳಿ ಕಾರೊಂದು ನಿಂತಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ತಮ್ಮಂದಿರಾದ ಶ್ರೇಯಸ್ ಹಾಗೂ ಧೀರಜ್ ಅವರೊಂದಿಗೆ ದೇವಸ್ಥಾನದತ್ತ ತೆರಳಿ ನೋಡಿದಾಗ ವ್ಯಕ್ತಿಯೊಬ್ಬ ದೇವಸ್ಥಾನದ ಗಂಟೆಯನ್ನು ಕಳವು ಮಾಡುತ್ತಿದ್ದುದಾಗಿ ದೂರಲಾಗಿದೆ. ಗಣೇಶ ಅವರು ಬೊಬ್ಬೆ ಹಾಕುತ್ತಿದ್ದಂತೆ ಆರೋಪಿ ಗಂಟೆಯನ್ನು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಇದಾದ ಬಳಿಕ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಕಾರಿನ ಬಳಿ ಗಣೇಶ ತೆರಳಿದಾಗ, ಕಾರಿನಲ್ಲಿದ್ದ ವ್ಯಕ್ತಿ ಏಕಾಏಕಿ ಕಾರನ್ನು ಚಲಾಯಿಸಿ ಗಣೇಶ ಅವರ ಮೈಮೇಲೆ ಹಾಯಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸ್ಥಳೀಯರು ವಿಷಯ ತಿಳಿದು ಕಾರನ್ನು ತಡೆದು ಪರಿಶೀಲಿಸಿದಾಗ ಗ್ರೇ ಬಣ್ಣದ ಟಾಟಾ ಪಂಚ್ ಕಾರು ಪತ್ತೆಯಾಗಿದ್ದು, ಅದರ ನೋಂದಣಿ ಸಂಖ್ಯೆ KA-47-N-1624 ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ತನ್ನ ಹೆಸರು ಮುಜಾಯಿದ್ ಎಂದು ತಿಳಿಸಿದ್ದು, ದೇವಸ್ಥಾನದ ಗಂಟೆ ಕದ್ದುಕೊಂಡು ಪರಾರಿಯಾದ ವ್ಯಕ್ತಿ ಸಫಾದ್ ಎಂಬುದಾಗಿ ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನದ ಗಂಟೆ ಕಳವು ಮಾಡುವುದರ ಜೊತೆಗೆ, ಕೃತ್ಯವನ್ನು ಪ್ರಶ್ನಿಸಿದ ಯುವಕನ ಮೇಲೆಯೇ ಕಾರು ಹಾಯಿಸಿ ಕೊಲೆ ಮಾಡಲು ಯತ್ನಿಸಿರುವ ಆರೋಪ ಪ್ರಕರಣಕ್ಕೆ ಮತ್ತಷ್ಟು ಗಂಭೀರ ಸ್ವರೂಪ ನೀಡಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2026ರಂತೆ BNS ಕಲಂ 303(2), 109 ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *