ಅರಣ್ಯ ಸಿಬ್ಬಂದಿ ಗುಂಡಿಗೆ ಮೂವರ ಬಲಿ: ಹನೂರಿನಲ್ಲಿ ಉದ್ವಿಗ್ನತೆ, ಶಾಸಕನ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಅಂತ್ಯ – ₹15 ಲಕ್ಷ ಪರಿಹಾರ – ಉದ್ಯೋಗದ ಭರವಸೆ

ಅರಣ್ಯ ಸಿಬ್ಬಂದಿ ಗುಂಡಿಗೆ ಮೂವರ ಬಲಿ: ಹನೂರಿನಲ್ಲಿ ಉದ್ವಿಗ್ನತೆ, ಶಾಸಕನ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಅಂತ್ಯ – ₹15 ಲಕ್ಷ ಪರಿಹಾರ – ಉದ್ಯೋಗದ ಭರವಸೆ


ಚಾಮರಾಜನಗರ: ಹನೂರು ತಾಲೂಕಿನ ಶಾಗ್ಯ ಗ್ರಾಮದ ಸಮೀಪದ ಮರಿಮಂಗಲ ಬೀಟ್‌ನಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ತೊಮಿಯರ್ ಪಾಳ್ಯದ ಮೂವರು ಮೃತಪಟ್ಟಿದ್ದು, ಇದನ್ನ ಖಂಡಿಸಿ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿಕೊಂಡು ತೀವ್ರ ಸ್ವರೂಪ ಪ್ರತಿಭಟನೆ ನಡೆಸಿದ್ದಾರೆ. ಯಾವ ಅಧಿಕಾರಿಗಳ ಮನವಿಗೂ ಬಗ್ಗದವರು ಕೊನೆಗೆ ಹಾನೂರು ಶಾಸಕ ಮಂಜುನಾಥ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಸಕರು ಮೃತ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಜೊತೆಗೆ ಉದ್ಯೋಗದ ಭರವಸೆ ನೀಡಿ ಹಾಗೇ ಉನ್ನತ ಮಟ್ಟದ ತನಿಖೆ ನಡೆಸುವ ಆಶ್ವಾಸನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

2 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದೀರಿ. ಈಗ ಸದ್ಯಕ್ಕೆ 15 ಲಕ್ಷ ರೂ. ಕೊಡಿಸುತ್ತೇನೆ. ಸರ್ಕಾರಿ ಉದ್ಯೋಗದ ಕುರಿತು ಕೂಡ ಸರ್ಕಾರದ ಬಳಿ ಮಾತನಾಡುತ್ತೇನೆ. ನಿಮ್ಮ ಜೊತೆ ನಾನು ಇರುತ್ತೇನೆ. ಪೋಸ್ಟ್ ಮಾರ್ಟಂ ಮುಗಿಸಿ ಮೃತದೇಹ ತನ್ನಿ ಎಂದು ಮನವಿ ಮಾಡಿದರು. ಶಾಸಕರ ಈ ಮನವಿಗೆ ಕುಟುಂಬಸ್ಥರು ಒಪ್ಪಿಕೊಂಡು ಪ್ರತಿಭಟನೆ ಕೈಬಿಟ್ಟು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಒಪ್ಪಿದ್ದಾರೆ. ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಮಂತ್ರಿಗಳ ಮಾತಿಗೂ ಜಗ್ಗದೇ ಧರಣೆ ನಡೆಸುತ್ತಿದ್ದವರನ್ನು ಶಾಸಕ ಮಂಜುನಾಥ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದ್ದು, ಕ್ಷೇತ್ರದಲ್ಲಿ ಉದ್ವಿಗ್ನತೆ ಮತ್ತು ಪ್ರತಿಭಟನೆಗಳು ಮುಂದುವರಿದಿದ್ದರಿಂದ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಹನೂರಲ್ಲಿಯೇ ಮೊಕ್ಕಾಂ ಹೂಡಿದ್ದು, ಇತ್ತ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ 3 ಮೃತದೇಹದ ಪಂಚನಾಮೆಗೆ ಸಿದ್ಧತೆ ನಡೆದಿದೆ. ಇನ್ನು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ವಿಪಕ್ಷಗಳ ನಾಯಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *