10 ಲಕ್ಷ ಮೌಲ್ಯದ ಚಿನ್ನ–ವಜ್ರಾಭರಣ ಕದ್ದ ಇಲಿ: ಸಿಸಿಟಿವಿಯಲ್ಲಿ ಬಯಲಾಯ್ತು ಇಲಿಯ ಕೃತ್ಯ!

ತುಮಕೂರು: ನಗರದ ಕಾಲ್ ಟೆಕ್ಸ್ ಸರ್ಕಲ್ ಸಮೀಪದ ಪ್ರತಿಷ್ಠಿತ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ಸುಮಾರು ₹10 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳು ನಾಪತ್ತೆಯಾಗಿದ್ದ ಪ್ರಕರಣವು ಕೊನೆಗೆ ಅಚ್ಚರಿಯ ತಿರುವು ಪಡೆದುಕೊಂಡಿದ್ದು, ಇಲಿಯೊಂದು ಆಭರಣಗಳನ್ನು ಬಿಲಕ್ಕೆ ಎಳೆದುಕೊಂಡು ಹೋಗಿರುವುದು ಸಿಸಿಟಿವಿ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಪ್ರತಿ ದಿನದಂತೆ ಬೆಳಿಗ್ಗೆ ಅಂಗಡಿ ತೆರೆದ ಬಳಿಕ ಸಿಬ್ಬಂದಿ ಚಿನ್ನಾಭರಣಗಳ ಲೆಕ್ಕಪರಿಶೀಲನೆ ನಡೆಸಿದ ವೇಳೆ ಸುಮಾರು 50 ಗ್ರಾಂಗೂ ಅಧಿಕ ತೂಕದ 10 ಉಂಗುರಗಳು ಹಾಗೂ 2–3 ಚಿನ್ನದ ಸರಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಆರಂಭದಲ್ಲಿ ಲೆಕ್ಕಾಚಾರದಲ್ಲಿ ತಪ್ಪಾಗಿರಬಹುದು ಎಂದು ಮರುಪರಿಶೀಲನೆ ನಡೆಸಿದರೂ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಮಾಲೀಕರು ಆತಂಕಕ್ಕೊಳಗಾದರು.
ಅಂಗಡಿಯ ಶಟರ್ ಅಥವಾ ಬಾಗಿಲು ಮುರಿದಿರುವ ಯಾವುದೇ ಗುರುತು ಕಂಡುಬರಲಿಲ್ಲ. ಹೊರಗಿನಿಂದ ಯಾರಾದರೂ ಪ್ರವೇಶಿಸಿರುವ ಸುಳಿವೂ ಸಿಗದ ಕಾರಣ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಈ ವೇಳೆ ಇಲಿಯೊಂದು ಆಭರಣಗಳನ್ನು ಒಂದೊಂದಾಗಿ ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ದಾಖಲಾಗಿರುವುದು ಬೆಳಕಿಗೆ ಬಂದಿತು.
ತಕ್ಷಣ ಸಿಬ್ಬಂದಿ ಇಲಿಯ ಜಾಡು ಹಿಡಿದು ಅಂಗಡಿಯೊಳಗಿನ ಬಿಲವನ್ನು ಪತ್ತೆಹಚ್ಚಿ ತೋಡಿದಾಗ, ನಾಪತ್ತೆಯಾಗಿದ್ದ ಸುಮಾರು 10 ಉಂಗುರಗಳು ಹಾಗೂ 3 ಚಿನ್ನದ ಸರಗಳು ಸೇರಿದಂತೆ ವಜ್ರಾಭರಣಗಳು ಸುರಕ್ಷಿತವಾಗಿ ಪತ್ತೆಯಾದವು. ಆಭರಣಗಳಿಗೆ ಅಳವಡಿಸಿದ್ದ ಗುರುತು ಟ್ಯಾಗ್‌ಗಳನ್ನು ಇಲಿಗಳು ಕಚ್ಚಿ ನಾಶಪಡಿಸಿರುವುದೂ ಪರಿಶೀಲನೆ ವೇಳೆ ಗೊತ್ತಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ವಿಶ್ವಾಸ್ ಜ್ಯುವೆಲರಿ ಮಾಲೀಕ ವಿಶ್ವಾಸ್ ಅವರು ಮೊದಲಿಗೆ ಗ್ರಾಹಕರು ಕಳವು ಮಾಡಿರಬಹುದೆಂಬ ಅನುಮಾನ ಉಂಟಾಗಿತ್ತು. ಆದರೆ ಸಿಸಿಟಿವಿಯಲ್ಲಿ ಯಾವುದೇ ಕಳ್ಳತನ ಕಂಡುಬರಲಿಲ್ಲ. ಬಳಿಕ ಇಲಿ ಉಂಗುರವನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಗಮನಕ್ಕೆ ಬಂದಿತು. ನಂತರ ಎಲ್ಲಾ ಕೌಂಟರ್‌ಗಳನ್ನು ತೆರೆಯಿಸಿ, ಬೆಳಕು ಹರಿಸಿ ಹುಡುಕಿದಾಗ ಬಿಲದಲ್ಲಿ ನಾಪತ್ತೆಯಾಗಿದ್ದ ಎಲ್ಲಾ ಆಭರಣಗಳು ಪತ್ತೆಯಾದವು. ಈ ಸಂಪೂರ್ಣ ಕಾರ್ಯಾಚರಣೆಗೆ ಸುಮಾರು 13 ಗಂಟೆಗಳ ಕಾಲ ಬೇಕಾಯಿತು ಎಂದು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಎಲ್ಲಾ ಚಿನ್ನ ಹಾಗೂ ವಜ್ರಾಭರಣಗಳು ಸುರಕ್ಷಿತವಾಗಿ ಪತ್ತೆಯಾಗಿರುವುದರಿಂದ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಸಾಮಾನ್ಯವಾಗಿ ಕಳ್ಳತನದ ಅನುಮಾನ ಮೂಡಿಸುವಂತಹ ಪ್ರಕರಣವೊಂದು ಕೊನೆಗೆ ಇಲಿಯ ಕೃತ್ಯವೆಂದು ಬಹಿರಂಗವಾಗಿರುವುದು ಸ್ಥಳೀಯರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
