ಉಡುಪಿ: ದ್ವೇಷ ಭಾಷಣ ಪ್ರಕರಣ – ಶಾಸಕ ಯಶ್ಪಾಲ್ ಸುವರ್ಣ ಪೊಲೀಸ್ ವಿಚಾರಣೆಗೆ ಹಾಜರು

ಉಡುಪಿ: ರಾಹುಲ್ ಗಾಂಧಿ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುರುವಾರ ರಾತ್ರಿ ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆಗೆ ಒಳಗಾದರು.
ಮಂಗಳವಾರ ಉಡುಪಿ ನಗರದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ನೀಡಿದ್ದ ಭಾಷಣದ ಕುರಿತು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸಂಬಂಧ ಬುಧವಾರ ಪೊಲೀಸರು ಶಾಸಕರ ನಿವಾಸಕ್ಕೆ ತೆರಳಿ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಗುರುವಾರ ರಾತ್ರಿ ಸುಮಾರು 8.25ಕ್ಕೆ ನಗರ ಠಾಣೆಗೆ ಆಗಮಿಸಿದ ಶಾಸಕ ಯಶ್ ಪಾಲ್ ಸುವರ್ಣ ಅವರನ್ನು ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.
ಮೂಲಗಳ ಪ್ರಕಾರ, ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 72 ಪ್ರಶ್ನೆಗಳನ್ನು ಕೇಳಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ತಡವರಿಸಿದ್ದು ಹಾಗೂ ಕಕ್ಕಾಬಿಕ್ಕಿಯಾಗಿರುವುದು ತಿಳಿದುಬಂದಿದೆ.
ವಿಚಾರಣೆ ಪೂರ್ಣಗೊಂಡ ಬಳಿಕ ರಾತ್ರಿ ಸುಮಾರು 9.30ರ ವೇಳೆಗೆ ಶಾಸಕ ಯಶ್ ಪಾಲ್ ಸುವರ್ಣ ಪೊಲೀಸ್ ಠಾಣೆಯಿಂದ ನಿರ್ಗಮಿಸಿದರು. ಪ್ರಕರಣದ ತನಿಖೆಯನ್ನು ಉಡುಪಿ ನಗರ ಪೊಲೀಸರು ಮುಂದುವರಿಸಿದ್ದು, ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
