ಮಂಗಳೂರು: ಚೆಂಡು ತರಲು ನದಿಗಿಳಿದ ಯುವಕ ನೀರಲ್ಲಿ ಮುಳುಗಿ ಮೃತ್ಯು!

ಮಂಗಳೂರು: ಚೆಂಡು ತರಲು ನದಿಗಿಳಿದ ಯುವಕ ನೀರಲ್ಲಿ ಮುಳುಗಿ ಮೃತ್ಯು!

ಮಂಗಳೂರು: ಕಸಬಾ ಬೆಂಗ್ರೆಯಲ್ಲಿ ಫುಟ್‌ಬಾಲ್ ಆಟವಾಡುತ್ತಿದ್ದ ವೇಳೆ ನದಿಗೆ ಬಿದ್ದ ಚೆಂಡನ್ನು ತರಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಭಾನುವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಕಸಬಾ ಬೆಂಗ್ರೆ ನಿವಾಸಿ ಅಬೂಸಾಲಿ ಅವರ ಪುತ್ರ ಸನಾವುಲ್ಲಾ (25) ಎಂದು ಗುರುತಿಸಲಾಗಿದೆ.

ಕಸಬಾ ಬೆಂಗ್ರೆ ಬಳಿಯ ಮೈದಾನದಲ್ಲಿ ಬಾಲಕರು ಫುಟ್‌ಬಾಲ್ ಆಡುತ್ತಿದ್ದ ಸಂದರ್ಭ ಚೆಂಡು ನದಿಗೆ ಬಿದ್ದಿದೆ. ಚೆಂಡನ್ನು ತರಲು ಸನಾವುಲ್ಲಾ ನದಿಗೆ ಇಳಿದಿದ್ದು, ನದಿಯ ಆಳದ ಅರಿವಿಲ್ಲದೆ ನೀರಿನಲ್ಲಿ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.

ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ನದಿಗೆ ಇಳಿದು ಸನಾವುಲ್ಲಾ ಅವರನ್ನು ಮೇಲಕ್ಕೆತ್ತಿ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆಯ ಸುದ್ದಿ ತಿಳಿದು ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *