ದೇಶದ ಸಂಸ್ಕೃತಿ ಮತ್ತು ಭವಿಷ್ಯ ರೂಪಿಸುವ ಶಿಕ್ಷಕರಿಗೆ ರಾಜ್ಯಮಟ್ಟದ ಗೌರವ:
700ಕ್ಕೂ ಅಧಿಕ ಶಿಕ್ಷಕರಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ
ಬೆಂಗಳೂರು: ದೇಶದ ಭವಿಷ್ಯ ರೂಪಿಸುವುದರ ಜತೆಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ವಿವಿಧ ಗಣ್ಯರು ಅಭಿಪ್ರಾಯಪಟ್ಟರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಭಾರತ ಜೋಡೋ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯದ ವಿವಿಧ ಭಾಗಗಳ 700ಕ್ಕೂ ಅಧಿಕ ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಮಾತನಾಡಿ, ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ಬೆಳವಣಿಗೆ ಅತ್ಯಂತ ಕಳವಳಕಾರಿ ಹಾಗೂ ಅಪಾಯಕಾರಿ ಸಂಗತಿಯಾಗಿದೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಿದ್ದು, ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಅಖಿಲ ಭಾರತ ಶಾಲಾ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖಂಡ ಹರಿಪ್ರಸಾದ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ದೇಶದ ಏಕತೆ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದರು.
ಹಿರಿಯ ಕಾಂಗ್ರೆಸ್ ನಾಯಕಿ ರಾಣಿ ಸತೀಶ್ ಮಾತನಾಡಿ, ಶಿಕ್ಷಕರು ನಮ್ಮ ದೇಶದ ಅಮೂಲ್ಯ ಆಸ್ತಿ. ಬಸವರಾಜ ಗುರಿಕಾರ ಅವರು ಸತತ ಮೂರು ವರ್ಷಗಳಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡುತ್ತಾ ಶಿಕ್ಷಕರ ಸೇವೆಯನ್ನು ಗುರುತಿಸುತ್ತಿರುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಈ ಬಾರಿ 700ಕ್ಕೂ ಅಧಿಕ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಪ್ರದೇಶದ ಶಿಕ್ಷಕರಿಗೆ ರಾಜ್ಯಮಟ್ಟದ ಗೌರವ
ಈ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಿಕೊಪ್ಪದ ಮುಖ್ಯ ಶಿಕ್ಷಕ ಎಂ.ಎಸ್. ಹಿರೇಮಠ, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಚ್.ಎಂ. ಗುತ್ತಲ, ಪಿ.ಎಂ. ಶ್ರೀ ಆದರಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಂ. ಲಮಾಣಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಎ. ಬುಕ್ಕಿಟಗಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ್ ತಿರಕಪ್ಪನವರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉಮೇಶ್ ನಾಗವ್ವನವರ ಅವರಿಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ.ಎಫ್. ಈರಗಾರ, ಆನಂದ ಭೂತರಡ್ಡಿ, ಸಿ.ಆರ್.ಪಿ. ಶಿವಾನಂದ ಅಸುಂಡಿ, ಪಿ.ಬಿ. ನದಾಫ್, ಡಿ.ಜಿ. ಸಂಗಮ್ಮನವರ, ಚಂದ್ರು ಆಂಟಿನ್, ವಿ.ಪಿ. ಚೆನ್ನಗಿರಿ, ಶಿವಯೋಗಿ ಅಂಗಡಿ ಸೇರಿದಂತೆ ಅನೇಕ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಕರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಮತ್ತಷ್ಟು ಪ್ರೇರಣೆ ಹಾಗೂ ಆತ್ಮವಿಶ್ವಾಸ ನೀಡಲಿವೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
