ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದ್ಯಮಿ!

ಬೆಂಗಳೂರು: ಬೆಂಗಳೂರು ಮೂಲದ ಉದ್ಯಮಿಯೋರ್ವ ಕಾಡಾನೆ ಜೊತೆಗೆ ಸೆಲ್ಫಿ ತೆಗೆಯಲು ಹೋಗಿ ಜೀವಕಳೆದುಕೊಂಡ ದಾರುಣ ಘಟನೆ ರಾಮನಗರ ಜಿಲ್ಲೆಯ ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ಸಂಭವಿಸಿದೆ.
ಮೃತರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಉದ್ಯಮಿ ನರೇಂದ್ರ ಶಿಂಧೆ (52) ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ ಸುಮಾರು 1.30ರ ವೇಳೆಗೆ ನರೇಂದ್ರ ಶಿಂಧೆ ಅವರು ತಮ್ಮ 10 ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿದ್ದು, ಅಲ್ಲಿಂದ ಮೂರು ಕಾರುಗಳಲ್ಲಿ ಹಿಂದಿರುಗುತ್ತಿದ್ದ ವೇಳೆ ಕನಕಪುರ ವನ್ಯಜೀವಿ ಅಭಯಾರಣ್ಯದ ಬಸವನಬೆಟ್ಟ ಸಮೀಪ ಕರಬಗೆರೆ ಕೆರೆಯ ಬಳಿ ಈ ದುರ್ಘಟನೆ ನಡೆದಿದೆ.
ಆರಂಭದಲ್ಲಿ ನರೇಂದ್ರ ಶಿಂಧೆ ಸ್ನೇಹಿತರು ಮೂತ್ರ ವಿಸರ್ಜನೆಗಾಗಿ ಸೋಲಿಗೆರೆ ಮತ್ತು ಹರಿಹರ ಗ್ರಾಮಗಳ ನಡುವಿನ ಅರಣ್ಯ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿದ ಬಳಿಕ ಸ್ನೇಹಿತರೊಂದಿಗೆ ಶಿಂಧೆ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಇಳಿದಿದ್ದಾಗ ಕಾಡಾನೆ ದಾಳಿ ನಡೆಸಿದೆ ಎಂದು ಹೇಳಿದ್ದರು. ಆದರೆ, ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ
ಅಧಿಕಾರಿಗಳ ಪ್ರಕಾರ, ಕೆರೆಯ ಸಮೀಪ ನಿಂತಿದ್ದ ಕಾಡಾನೆಯೊಂದಿಗೆ ಫೋಟೊ ಅಥವಾ ಸೆಲ್ಫಿ ತೆಗೆಯಲು ಶಿಂಧೆ ಕಾರಿನಿಂದ ಇಳಿದಿದ್ದರು. ಆನೆಯತ್ತ ಬೆನ್ನು ಮಾಡಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ. ಆನೆಯ ದಂತಗಳು ಶಿಂಧೆ ಅವರ ಸೊಂಟ ಹಾಗೂ ಬೆನ್ನಿಗೆ ತಾಕಿದ್ದು, ಅವರು ತಪ್ಪಿಸಿಕೊಳ್ಳುವಷ್ಟರಲ್ಲಿ ಸಮೀಪದ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಆನೆ ದಾಳಿ ನಡೆಸಿದ ಕ್ಷಣದಿಂದ ಕೇವಲ ಮೂರರಿಂದ ಐದು ಸೆಕೆಂಡುಗಳಲ್ಲೇ ಅವರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಸ್ನೇಹಿತರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದು ಬೆಂಗಳೂರಿಗೆ ಕೊಂಡೊಯ್ಯಲು ಪ್ರಯತ್ನಿಸಿದ್ದರು. ಆದರೆ, ಅರಣ್ಯ ಸಿಬ್ಬಂದಿ ಗೇಟ್ ಬಳಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎಂ. ರಾಮಕೃಷ್ಣಪ್ಪ ಮಾತನಾಡಿ, ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಕಾರು ನಿಲ್ಲಿಸಿದ್ದ ಸ್ಥಳದಿಂದ ಕೆರೆಯವರೆಗೆ ಸುಮಾರು 50 ಮೀಟರ್ ದೂರವಿದ್ದು, ಆನೆ ದಾಳಿ ನಡೆಸಿದಾಗ ಶಿಂಧೆ ಅವರಿಗೆ ತಪ್ಪಿಸಿಕೊಳ್ಳುವ ಯಾವುದೇ ಅವಕಾಶ ಇರಲಿಲ್ಲ ಎಂದು ಹೇಳಿದ್ದಾರೆ.
ಈ ಅರಣ್ಯ ಪ್ರದೇಶದಲ್ಲಿ ಸೆಲ್ಫಿ ಅಥವಾ ಫೋಟೊ ತೆಗೆಯುವ ಪ್ರಯತ್ನದ ವೇಳೆ ಕಾಡಾನೆ ದಾಳಿಯಿಂದ ಸಂಭವಿಸಿದ ಮೊದಲ ಸಾವು ಇದಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
