ಬಂಟ್ವಾಳ: ಬಶೀರ್ ಬಂಟ್ವಾಳ ಅವರಿಂದ ಸಾರ್ವಜನಿಕ ಸೇವೆಗೆ ಇಝ್ಝತುನ್ನೂರು ಯತೀಂ ಖಾನಾ ಗೆ ಅಂಬುಲೆನ್ಸ್ ಹಸ್ತಾಂತರ

ಬಂಟ್ವಾಳ: ದುಬಾಯಿ ಅಸ್ತರ್ ಆಸ್ಪತ್ರೆಯ ಅಸಿಸ್ಟೆಂಟ್ ಜನರಲ್ ಮೆನೇಜರ್
ಉದ್ಯಮಿ ಬಶೀರ್ ಬಂಟ್ವಾಳ ಅವರು, ಇತ್ತೀಚೆಗೆ ನಿಧನರಾದ ತನ್ನ ಸಹೋದರ ಮರ್ಹೂಮ್ ಅಬ್ದುರ್ರಹ್ಮಾನ್ ಅವರ ಹೆಸರಿನಲ್ಲಿ ಆ್ಯಂಬುಲೆನ್ಸ್ ಅನ್ನು ಸಾರ್ವಜನಿಕ ಸೇವೆಗಾಗಿ ಶುಕ್ರವಾರ ಲೋಕಾರ್ಪಣೆ ಗೊಳಿಸಿದರು.
ಲೊರೆಟ್ಟೋಪದವು – ಟಿಪ್ಪು ನಗರದ ಇಝ್ಝತುನ್ನೂರು ಯತೀಂ ಖಾನಾ ಗೆ ಅಂಬುಲೆನ್ಸ್ ಅನ್ನು ಹಸ್ತಾಂತರಿಸಿದ ಅವರು ಮೃತಪಟ್ಟಿರುವ ಸಹೋದರನ ಹೆಸರಿನಲ್ಲಿ ಈ ಆ್ಯಂಬುಲೆನ್ಸ್ ಒಂದನ್ನು ಸಮಾಜಕ್ಕಾಗಿ ಅರ್ಪಿಸಲಾಗಿದೆ. ಯಾವುದೇ ಜಾತಿ ಮತ ಧರ್ಮದ ಭೇದವಿಲ್ಲದೆ ಅವಶ್ಯಕತೆ ಇದ್ದವರು ಇದರ ಪ್ರಯೋಜನ ಪಡೆಯಬಹುದು ಎಂದ ಅವರು ಆ್ಯಂಬುಲೆನ್ಸ್ ನ ಮೂಲಕ ಸರ್ವ ಸಮಾಜದ ಜನರಿಗೆ ಆರೋಗ್ಯ ಸೇವೆ ಸಿಗುವಂತಾಗಲಿ ಎಂದು ಆಶಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಲೊರೆಟ್ಟೋ ಚರ್ಚ್ ನ ಧರ್ಮಗುರು ಜೇಮ್ಸ್ ಡಿ.ಸೋಜ ಮಾತನಾಡಿ ಮನುಷ್ಯನಲ್ಲಿ ಎಲ್ಲಾ ಸದ್ಗುಣಗಳಿದ್ದರೂ ಮಾನವೀಯತೆ ಇಲ್ಲದಿದ್ದರೆ ಆತನ ಜೀವನ ಸಾರ್ಥಕವಲ್ಲ, ಅಶಕ್ತರು, ಬಡವರ ಸೇವೆಯಲ್ಲಿ ತೊಡಗಿಸಿಕೊಂಡಾಗ ಭಗವಂತನ ಅನುಗ್ರಹ, ಪ್ರೀತಿ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಶೀರ್ ಅವರ ಕಾರ್ಯ ಶ್ಲಾಘನೀಯ ಎಂದರು.

ಸಯ್ಯಿದ್ ಅಸ್ಗರ್ ಅಲಿ ತಂಙಳ್ ಗಂಜಿಮಠ ದುಹಾ ನೆರವೇರಿಸಿದರು. ಬಂಟ್ವಾಳ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಮದ್ ಯಮಾನಿ, ಅಡ್ಯಾರ್ – ಕಣ್ಣೂರು ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಫೈಝಿ ಬುರ್ಹಾನಿ, ನಿವೃತ್ತ ಶಿಕ್ಷಕಿ ಪ್ರಫುಲ್ಲಾ, ಅವರು ಮಾತನಾಡಿ ಬಶೀರ್ ಬಂಟ್ವಾಳ ಅವರ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಟ್ವಾಳ ಪುರಸಭಾ ನಿಕಟಪೂರ್ವ ಸದಸ್ಯ ಎ.ಗೋವಿಂದ ಪ್ರಭು, ಯತೀಂ ಖಾನಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಕೋಶಾಧಿಕಾರಿ ಹಂಝ ಪರ್ಲಿಯ, ಪ್ರಮುಖರಾದ ಸುಲೈಮಾನ್ ಬಂಟ್ವಾಳ, ಅಹ್ಮದ್ ಹುಸೈನ್ ಮೂಡುಬಿದಿರೆ, ಹಾರೂನ್ ರಶೀದ್ ಬಂಟ್ವಾಳ, ಖಲೀಲುಲ್ಲಾ ಬಂಟ್ವಾಳ, ಹಮೀದ್ ನಿಝಾಮಿ, ರಿಯಾಝ್ ಲೊರೆಟ್ಟೋ, ಶಾಕಿರ್ ಮೊದಲಾದವರು ಉಪಸ್ಥಿತರಿದ್ದರು.

ಯತೀಂ ಖಾನಾದ ಗುರುಗಳಾದ ಖಲಂದರ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಾದಾತ್ ಕಾವಳಕಟ್ಟೆ ಕಿರಾಅತ್ ಪಠಿಸಿದರು. ರಾಜ್ಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
