ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಅಂತಿಮ ಮುದ್ರೆ: 20 ಮಂದಿಗೆ ಸಚಿವ ಸ್ಥಾನ, ಇಂದು ಸಂಜೆ ಪ್ರಮಾಣವಚನ

ಬೆಂಗಳೂರು: ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. 20 ಮಂದಿ ಶಾಸಕರಿಗೆ ಈ ಬಾರಿ ಮಂತ್ರಿ ಪಟ್ಟ ಸಿಕ್ಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಸುರ್ಜೇವಾಲಾ, ಕೆಸಿ ವೇಣುಗೋಪಾಲ್ ಅಂತಿಮ ಸಭೆ ನಡೆಸಿ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ.
ಸ್ಫಿಕರ್ ಸ್ಥಾನಕ್ಕೆ ಟಿ.ಬಿ.ಜಯಚಂದ್ರ ಹೆಸರು ಅಂತಿಮಗೊಂಡಿದೆ. ಸ್ಪೀಕರ್ ರೇಸ್‌ನಲ್ಲಿ ಆರ್‌ವಿ ದೇಶಪಾಂಡೆ, ದಿನೇಶ್ ಗುಂಡೂರಾವ್ ಹೆಸರು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಹೈಕಮಾಂಡ್ ನಾಯಕರು ಟಿ.ಬಿ.ಜಯಚಂದ್ರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.
ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಹೊರಭಾಗದಲ್ಲಿ ಜರ್ಮನ್ ಟೆಂಟ್ ಅಳವಡಿಸುವ ಜೊತೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಮೂರು ದಿನಗಳ ಹಿಂದೆಯೇ ಮಾಡಲಾಗಿದೆ. ಅಲ್ಲದೆ, ಬಂದೋಬಸ್ತಿಗೆ ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಪಟ್ಟಿಯಲ್ಲಿ ಯಾರಿದ್ದಾರೆ?
ಪಿಎಂ ನರೇಂದ್ರಸ್ವಾಮಿ, ಶಿವರಾಜ ತಂಗಡಗಿ, ರುದ್ರಪ್ಪ ಲಮಾಣಿ, ಕೆಎಸ್ ಬಸವಂತಪ್ಪ, ಬಿ ನಾಗೇಂದ್ರ, ಟಿ ರಘುಮೂರ್ತಿ, ಜಮೀರ್ ಅಹಮದ್ ಖಾನ್, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಪುಟ್ಟರಂಗಶೆಟ್ಟಿ, ಮಂಕಾಳ ವೈದ್ಯ , ಅಜಯ್ ಸಿಂಗ್, ಚಲುವರಾಯಸ್ವಾಮಿ, ಶಿವಲಿಂಗೇಗೌಡ, ಬಾಲಕೃಷ್ಣ, ಗಾಯತ್ರಿ ಶಾಂತೇಗೌಡ, ಬಸವರಾಜ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ್, ಲಕ್ಷ್ಮಣ ಸವದಿ
