ಕೋಟ: ಶಾಲಾ ಮಕ್ಕಳಿಗಾಗಿ ಹರ್ತಟ್ಟು ನವೋದಯ ಫ್ರೆಂಡ್ಸ್‌ನಿಂದ ನೂತನ ಬಸ್ ನಿಲ್ದಾಣ ಲೋಕಾರ್ಪಣೆ

ಕೋಟ: ಶಾಲಾ ಮಕ್ಕಳಿಗಾಗಿ ಹರ್ತಟ್ಟು ನವೋದಯ ಫ್ರೆಂಡ್ಸ್‌ನಿಂದ ನೂತನ ಬಸ್ ನಿಲ್ದಾಣ ಲೋಕಾರ್ಪಣೆ

ಕೋಟ: ನವೋದಯ ಫ್ರೆಂಡ್ಸ್, ಹರ್ತಟ್ಟು (ರಿ.) ಗಿಳಿಯಾರು, ಕೋಟ ಇದರ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಅನುಕೂಲಕ್ಕಾಗಿ ಸುಮಾರು ರೂ.50 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣವನ್ನು ಆ.15ರಂದು ಉದ್ಘಾಟಿಸಲಾಯಿತು.

ಬಸ್ ನಿಲ್ದಾಣವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸುಮಾರು ಮೂರು ದಶಕಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನವೋದಯ ಫ್ರೆಂಡ್ಸ್, ಹರ್ತಟ್ಟು ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು. ಸುಮಾರು 70 ಸದಸ್ಯರನ್ನು ಹೊಂದಿರುವ ಸಂಸ್ಥೆಯ ಸದಸ್ಯರೇ ತಮ್ಮ ಸ್ವಂತ ಸಂಪನ್ಮೂಲದಿಂದ ಬಸ್ ನಿಲ್ದಾಣ ನಿರ್ಮಿಸಿರುವುದು ಸಾರ್ವಜನಿಕ ಸೇವೆಯ ಉತ್ತಮ ಮಾದರಿಯಾಗಿದೆ ಎಂದರು.

ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಅಭಿನಂದನೀಯ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಪರಸ್ಪರ ಸಹಕಾರ ಹಾಗೂ ಜವಾಬ್ದಾರಿಯ ಮನೋಭಾವವನ್ನು ಬೆಳೆಸುತ್ತವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಹರ್ತಟ್ಟು ಗ್ರಾಮವನ್ನು ಹಸಿರು ಗ್ರಾಮವನ್ನಾಗಿಸುವ ಉದ್ದೇಶದಿಂದ ಹಸಿರು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಮಹಿಳಾ ಸದಸ್ಯರಿಗೆ 150 ಸಸಿಗಳನ್ನು ವಿತರಿಸಲಾಯಿತು. ಪರಿಸರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವಂತೆ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಣೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಉದ್ಯಮಿ ಶ್ಯಾಮಸುಂದರ್ ಭಂಡಾರಿ, ಹರ್ತಟ್ಟು ಅಜ್ಜಯ್ಯ ಪರಿವಾರ ದೇವಸ್ಥಾನದ ಅಧ್ಯಕ್ಷ ವಾಸುದೇವ್ ಮಯ್ಯ, ಕಲ್ಲೆಟ್ಟು ಶ್ರೀ ಮಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಿಮ್ಮಕಾಂಚನ್, ಚಂದ್ರ ಹರ್ತಟ್ಟು ಸೇರಿದಂತೆ ಗ್ರಾಮಸ್ಥರು ಹಾಗೂ ನವೋದಯ ಫ್ರೆಂಡ್ಸ್‌ನ ಸದಸ್ಯರು ಉಪಸ್ಥಿತರಿದ್ದರು.

ಸುಮಾರು ಮೂರು ದಶಕಗಳ ಸಾಮಾಜಿಕ ಸೇವೆಯೊಂದಿಗೆ ಮುಂದುವರಿದಿರುವ ನವೋದಯ ಫ್ರೆಂಡ್ಸ್, ಹರ್ತಟ್ಟು ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆಯ ಹಸಿರು ಅಭಿಯಾನ ಹಮ್ಮಿಕೊಂಡಿರುವುದು ಗ್ರಾಮದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *