ಉಳ್ಳಾಲ: ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ – ಇಬ್ಬರು ಆರೋಪಿಗಳ ಬಂಧನ

ಉಳ್ಳಾಲ: ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ – ಇಬ್ಬರು ಆರೋಪಿಗಳ ಬಂಧನ

ಮಂಗಳೂರು,ಆ.10: ತೊಕ್ಕೊಟ್ಟು ಜಂಕ್ಷನ್ ನಲ್ಲಿ ಭಾನುವಾರ ತಡರಾತ್ರಿ ಇಬ್ಬರು ಯುವಕರು ಮದ್ಯದ ಅಮಲಿನಲ್ಲಿ ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾ ಸಂಚರಿಸುತ್ತಿದ್ದ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲದ ಮಾರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ ( 31) ಹಾಗೂ ಮಂಚಿಲ ನಿವಾಸಿ, ಅಶ್ಪಾಕ್ (28) ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ಶಾಕಿರ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಅಶ್ಪಾಕ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ರೌಡಿ ಶೀಟ್ ತೆರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ:
ಭಾನುವಾರ ತಡರಾತ್ರಿ 12.15ರ ಸುಮಾರಿಗೆ ಆರೋಪಿ ಮೊಹಮ್ಮದ್ ಶಾಕಿರ್ ಕುಡಿದ ಮತ್ತಿನಲ್ಲಿ ತಲವಾರ್ ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಾ ರೋಡ್‌ನಲ್ಲಿ ಓಡಾಡುತ್ತಿದ್ದ, ನಂತರ ಅಶ್ಪಾಕ್‌ನ ಆಟೋ ರಿಕ್ಷಾ ಏರಿ ತೊಕ್ಕೊಟ್ಟುವಿನ ವೈನಮ್ರ ಬಾರ್‌ಗೆ ಬಂದಿಳಿದು ಬಾ‌ರ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ತಲವಾ‌ರ್ ತೋರಿಸಿ ತಕ್ಷಣವೇ ಬಾರ್ ಬಂದ್ ಮಾಡುವಂತೆ ಬೆದರಿಕೆ ಒಡ್ಡಿದ್ದಾನೆ.

ಬಾರ್‌ನಲ್ಲಿದ್ದ ಸಾರ್ವಜನಿಕರು ಹಾಗೂ ಕುಡಿಯುತ್ತಿದ್ದ ಗ್ರಾಹಕರು ತಲವಾ‌ರ್ ಹಿಡಿದಿದ್ದ ರೌಡಿಶೀಟರ್‌ನನ್ನು ನೋಡಿ ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಬಾರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಈ ಇಡೀ ಭೀಕರ ದೃಶ್ಯಾವಳಿಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಆತಂಕ ಸೃಷ್ಟಿಸಿತ್ತು. ಕೃತ್ಯದ ಗಂಭೀರತೆಯನ್ನು ಅರಿತ ಉಳ್ಳಾಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಲವಾರ್ ಸಮೇತ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ತಲವಾರು ಬಳಕೆ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಆರೋಪದಡಿ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *