ಬೈಂದೂರು: ರೈಲಿನಲ್ಲಿ ಮೊಬೈಲ್ ಕಳವು ಮಾಡಿ UPI ಮೂಲಕ ಹಣ ವರ್ಗಾವಣೆ – ಸರಣಿ ಕಳ್ಳತನ ಪ್ರಕರಣಗಳ ಆರೋಪಿ ಬಂಧನ

ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೊಬೈಲ್ ಫೋನ್ಗಳನ್ನು ಕಳವು ಮಾಡಿ, ಅವುಗಳ ಮೂಲಕ ಯುಪಿಐ (UPI) ವ್ಯವಸ್ಥೆ ಬಳಸಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡುತ್ತಿದ್ದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಾಸ್ತಾನ ಐರೋಡಿ ಗ್ರಾಮದ ಗೋಳಿಬೆಟ್ಟು ಪ್ರಹ್ಲಾದ್ (32) ಎಂದು ಗುರುತಿಸಲಾಗಿದೆ.
ಆಗಸ್ಟ್ 2ರಂದು ಮಂಗಳೂರಿನಿಂದ ಮಡಗಾಂವ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರುಬೆನ್ ಫೆರ್ನಾಂಡಿಸ್ ಎಂಬವರ ಸುಮಾರು 17 ಸಾವಿರ ರೂ. ಮೌಲ್ಯದ Motorola G54 5G ಮೊಬೈಲ್ ಫೋನ್ ಅನ್ನು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೈಂದೂರು ರೈಲು ನಿಲ್ದಾಣದ ಸಮೀಪ ಕಳವು ಮಾಡಲಾಗಿತ್ತು. ಬಳಿಕ ಕಳವು ಮಾಡಿದ ಮೊಬೈಲ್ ಬಳಸಿ ಯುಪಿಐ ಮೂಲಕ 19,847 ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿತ್ತು.
ವಿಚಾರಣೆ ವೇಳೆ ಆರೋಪಿ ಜೋಶಿ ನಾರಾಯಣ ನಾಯಕ್ ಎಂಬಾತನೊಂದಿಗೆ ಸೇರಿಕೊಂಡು ಬೈಂದೂರು ಸಮೀಪದ ರೈಲು ಪ್ರಯಾಣಿಕರ ಮೊಬೈಲ್ಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆಗಸ್ಟ್ 2ರಂದು Samsung M34 ಮೊಬೈಲ್ ಹಾಗೂ ಅಕ್ಟೋಬರ್ 13ರಂದು Apple iPhone 16 Pro Max ಮೊಬೈಲ್ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಮಾರ್ಚ್ 6ರಂದು ಬೈಂದೂರು ಸಮೀಪ ರೈಲಿನಲ್ಲಿ ಪ್ರಯಾಣಿಕರ IQ Z9 ಮೊಬೈಲ್ ಫೋನ್ ಕಳವು ಮಾಡಿರುವುದಾಗಿಯೂ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
ಈ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಅಪರಾಧ ಸಂಖ್ಯೆ 142/2026, 144/2026 ಹಾಗೂ 168/2026ರಂತೆ ಪ್ರಕರಣಗಳು ದಾಖಲಾಗಿವೆ.
ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳವು ಹಾಗೂ ಕಳವು ಮಾಡಿದ ಮೊಬೈಲ್ಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ ಪ್ರಕರಣಗಳ ತನಿಖೆಯನ್ನು ಬೈಂದೂರು ಪೊಲೀಸರು ಮುಂದುವರಿಸಿದ್ದಾರೆ.
