ಲಕ್ಷ್ಮೇಶ್ವರ: ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧಾ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಚಾರಗೋಷ್ಠಿಗಳು ಸಹಕಾರಿ: ಎಸ್.ಕೆ. ಹವಾಲ್ದಾರ

ಲಕ್ಷ್ಮೇಶ್ವರ: ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಜ್ಞಾನಿಕ ಅನ್ವೇಷಣೆಯ ಪ್ರವೃತ್ತಿಯನ್ನು ಬೆಳೆಸುವಲ್ಲಿ ವಿಜ್ಞಾನ ವಿಚಾರಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರದ ಶ್ರೀ ಜಗದ್ಗುರು ವೀರಗಂಗಾಧರ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಸಿ. ಪಟ್ಟೇದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಬಿಆರ್‌ಪಿ ಬಸವರಾಜ ಯರಗುಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಕುಶಾಲ್ ಹಾಗೂ ಶಿವರಾಜ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಸ್ಪರ್ಧೆಯಲ್ಲಿ ಎನ್‌ಜಿಪಿ ಸರ್ಕಾರಿ ಪ್ರೌಢಶಾಲೆ, ಮಾಢಳ್ಳಿಯ ಸಹನಾ ಜಂತ್ಲಿ ಪ್ರಥಮ ಸ್ಥಾನ, ಲಕ್ಷ್ಮೇಶ್ವರದ ಲಿಟಲ್ ಹಾರ್ಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಅನನ್ಯ ಮಾಗೋಡಮಠ ದ್ವಿತೀಯ ಸ್ಥಾನ ಹಾಗೂ ವಿದ್ಯಾಪೀಠ ಪಾಠಶಾಲೆಯ ಆದಿತ್ಯ ಶೇಠ್ ತೃತೀಯ ಸ್ಥಾನ ಗಳಿಸಿದರು. ವಿಜೇತ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಆರ್‌ಪಿ ಉಮೇಶ ನೇಕಾರ, ಬಿಐಇಆರ್‌ಟಿ ನಾಗರಾಜ ಮಜ್ಜಿಗುಡ್ಡ, ಪಿ.ಎಸ್. ಪುರಾಣಮಠ, ಎನ್.ಬಿ. ರಡ್ಡೇರ, ಮೇರಿ ಸೇರಿದಂತೆ ವಿವಿಧ ಶಾಲೆಗಳ ಮಾರ್ಗದರ್ಶಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
