ಎಕ್ಸಲೆಂಟ್‌ನಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ:
ವಿಕಸಿತ ಭಾರತದ ಕನಸಿಗೆ ವಿದ್ಯಾರ್ಥಿಗಳೇ ಶಕ್ತಿ – ನಿವೃತ್ತ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್

ಕುಂದಾಪುರ: ತ್ಯಾಗ-ಬಲಿದಾನಗಳ ಮೂಲಕ ದೊರೆತ ಸ್ವಾತಂತ್ರ್ಯವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ದೇಶ ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ, ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂಬ ಮನೋಭಾವ ನಮ್ಮಲ್ಲಿ ಬೆಳೆಯಬೇಕು. ಭಾರತ ಭೂಮಿಯಲ್ಲಿ ಮಾನವ ಜನ್ಮ ಪಡೆದಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ವಿಕಸಿತ ಭಾರತದ ನಿರ್ಮಾಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಪಾತ್ರವೂ ಮಹತ್ವದ್ದಾಗಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಹೇಳಿದರು.

ಶನಿವಾರ ಬೆಳಿಗ್ಗೆ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಹೈಸ್ಕೂಲ್‌ನಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಬದುಕುವುದರ ಜೊತೆಗೆ ಆತ್ಮಸಾಕ್ಷಿಯ ಮಾತನ್ನು ಗೌರವಿಸಬೇಕು. ತಪ್ಪು ಮಾಡುವ ಸಂದರ್ಭದಲ್ಲಿ ನಮ್ಮ ಒಳಮನಸ್ಸೇ ನಮ್ಮನ್ನು ಎಚ್ಚರಿಸುತ್ತದೆ. ಆತ್ಮಸಾಕ್ಷಿ ಎಂಬ ಅತಿ ದೊಡ್ಡ ನ್ಯಾಯಾಲಯಕ್ಕೆ ಎಂದಿಗೂ ಮೋಸ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯೆಯ ಜತೆಗೆ ಮಾನವೀಯತೆ ಮತ್ತು ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿರುವ ಎಲ್ಲ ಧರ್ಮಗಳನ್ನೂ ಗೌರವಿಸುವ, ಗುರುಹಿರಿಯರು ಹಾಗೂ ಸ್ನೇಹಿತರನ್ನು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಎಷ್ಟೇ ಸಾಧನೆ ಮಾಡಿದರೂ ಮನುಷ್ಯತ್ವವನ್ನು ಮರೆಯಬಾರದು ಎಂದು ಅಬ್ದುಲ್ ರಹೀಂ ಹುಸೇನ್ ಶೇಖ್ ನುಡಿದರು.
ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳ ಕೊಡುಗೆ ಅಗತ್ಯ- ರುಥ್ರನ್ ಪಿ., ಐಎಫ್‌ಎಸ್

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಂದಾಪುರ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್ ಪಿ., ಐಎಫ್‌ಎಸ್ ಮಾತನಾಡಿ, ಎಕ್ಸಲೆಂಟ್ ವಿದ್ಯಾ ಸಂಸ್ಥೆ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಮೌಲ್ಯಗಳು, ದೇಶಪ್ರೇಮ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಶೈಕ್ಷಣಿಕ ಸಾಧನೆಯ ಜತೆಗೆ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದೇ ಶಿಕ್ಷಣದ ನಿಜವಾದ ಉದ್ದೇಶ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಹಾಗೂ ದೇಶದ ಪ್ರಗತಿಯಲ್ಲಿ ತಮ್ಮ ಪಾತ್ರವನ್ನು ಅರಿತು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ. ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು.

ಸಂಸ್ಥೆಯ ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಪರಂಪರೆಯನ್ನು ಎಕ್ಸಲೆಂಟ್ ಸಂಸ್ಥೆ ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ. ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಂದ ಹಿಡಿದು JEE, NEET, CET ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಸಂಸ್ಥೆ ಗುರುತಿಸಿ ಗೌರವಿಸುತ್ತಿದೆ. ಈ ಬಾರಿ ಸುಮಾರು 65 ಮಂದಿ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂಸ್ಥೆಯ ಶೈಕ್ಷಣಿಕ ಸಾಧನೆಯ ಪ್ರತೀಕವಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ಅವಕಾಶಗಳನ್ನು ಕಲ್ಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರು, ಉಪನ್ಯಾಸಕರು, ವಸತಿ ನಿಲಯದ ವಾರ್ಡನ್‌ಗಳು ಸೇರಿದಂತೆ ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಯ ಅವಿರತ ಪರಿಶ್ರಮವಿದೆ ಎಂದು ನಾಗರಾಜ್ ಶೆಟ್ಟಿ ಹೇಳಿದರು. ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ತಡರಾತ್ರಿಯವರೆಗೂ ಪಾಠ ಬೋಧಿಸುತ್ತಿರುವ ದೀಪಾ ಮೇಡಂ ಅವರ ಸಮರ್ಪಣಾ ಸೇವೆಯನ್ನು ಅವರು ಶ್ಲಾಘಿಸಿದರು.




ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಧ ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಗಣ್ಯರ ಸಮ್ಮುಖದಲ್ಲಿ ಶ್ರೀ ರಾಮಚಂದ್ರ ಸರ್ ಅವರ ಕಂಪ್ಯೂಟರ್ ಸೈನ್ಸ್ ಪುಸ್ತಕದ ದ್ವಿತೀಯ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಎಕ್ಸಲೆಂಟ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ, ಸಿಬಿಎಸ್‌ಇ ವಿಭಾಗದ ಸಂಯೋಜಕಿ ವಿಶಾಲ ಶೆಟ್ಟಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸರೋಜಿನಿ ಪಿ. ಆಚಾರ್ಯ ಸ್ವಾಗತಿಸಿ, ಸುಜಾತ ಕಿರಣ್ ನಿರೂಪಿಸಿದರು. ವಿಶಾಲ ಶೆಟ್ಟಿ ಧನ್ಯವಾದ ಸಲ್ಲಿಸಿದರು
