ಎಂ.ಕೋಡಿಯಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ: ಹುತಾತ್ಮರ ತ್ಯಾಗ ಸ್ಮರಣೆ

ಕುಂದಾಪುರ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಂದಾಪುರ ತಾಲೂಕಿನ ಎಂ.ಕೋಡಿಯ ಬಿಲಾಲ್ ಜುಮಾ ಮಸೀದಿ ಆವರಣದಲ್ಲಿ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬಿಲಾಲ್ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಅಝೀಝ್ ಅಮಾನಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಮಹನೀಯರನ್ನು ಸ್ಮರಿಸಿ, ಅವರ ತ್ಯಾಗ, ಹೋರಾಟ ಮತ್ತು ದೇಶಪ್ರೇಮವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯವೆಂಬುದು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ದೇಶಕ್ಕಾಗಿ ಬಲಿದಾನಗೈದ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ದೇಶದ ಏಕತೆ, ಸೌಹಾರ್ದತೆ, ಸಹಬಾಳ್ವೆ ಹಾಗೂ ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಮೀದ್ ಸಧರ್ ಉಸ್ತಾದರು, ಅಧ್ಯಕ್ಷ ಮೊಹಮ್ಮದ್ ಅಲಿ ಕುಙಿಮೋನ್, ನಾಗರಾಜ್ ಕಿಣಿ, ಅಯ್ಯೂಬ್ ಕೋಡಿ, ರಿಯಾಝ್ ಕೋಡಿ, ಹಂಝಾ ಕೆ.ಎಚ್. ಕೋಡಿ, ಕೆ.ಎ. ಮೊಹಮ್ಮದ್, ಮೊಹಮ್ಮದ್ ಮೊಹಿದ್ದೀನ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಸಮಾಜ ಸೇವಕ ಅಬ್ಬಾಸ್ ಕೋಡಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
