ಉಳ್ಳಾಲ: ಬಾಡಿಗೆ ಮನೆ ನೆಪದಲ್ಲಿ ಮನೆಗೆ ನುಗ್ಗಿದ ಕಿರಾತಕರು: ವೃದ್ಧೆಯ ಮೇಲೆ ಹಲ್ಲೆ ನಡೆಸಿ ₹73 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ!

ಉಳ್ಳಾಲ: ಬಾಡಿಗೆ ಮನೆ ನೆಪದಲ್ಲಿ ಮನೆಗೆ ನುಗ್ಗಿದ ಕಿರಾತಕರು: ವೃದ್ಧೆಯ ಮೇಲೆ ಹಲ್ಲೆ ನಡೆಸಿ ₹73 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ!

ಉಳ್ಳಾಲ: ಇನ್ಫೋಸಿಸ್ ಉದ್ಯೋಗಿಗಳು ಎಂದು ನಂಬಿಸಿ ನಾವು ಬ್ರಾಹ್ಮಣರು ಬಾಡಿಗೆ ಮನೆ ಬೇಕೆಂದು ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ವೃದ್ಧೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸುಮಾರು 73 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾದ ಘಟನೆ ಆ. 3 ರಂದು ಸೋಮವಾರ ಮಧ್ಯಾಹ್ನ ಸುಮಾರು 1.15ರ ವೇಳೆಗೆ ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಕಾಯರಗೋಳಿಯ ನಿವಾಸಿ ಭವಾನಿ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ.

ಭವಾನಿ ಅವರ ಮಗ ಕೆಲಸಕ್ಕೆ ತೆರಳಿದ್ದ ವೇಳೆ ಮನೆಗೆ ಬಂದ ಇಬ್ಬರು ಅಪರಿಚಿತ ಯುವಕರು, ನಾವು ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತೇವೆ. ನಮಗೆ ಬಾಡಿಗೆ ಮನೆ ಬೇಕು. ಬ್ರಾಹ್ಮಣರಿಗೆ ಮನೆ ಇದೆಯೇ? ಎಂದು ಕೇಳಿದ್ದಾರೆ.
ಭವಾನಿ ಅವರು ಮಗ ಬಂದ ನಂತರ ಕೇಳಿ ಹೇಳುತ್ತೇನೆ ಎಂದಾಗ ಆರೋಪಿಗಳು ಮಗನ ಮೊಬೈಲ್ ಸಂಖ್ಯೆಯನ್ನು ಕೇಳಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿಸಿದ ಬಳಿಕ ವೃದ್ಧೆ ಬಾಗಿಲು ಮುಚ್ಚಲು ಮುಂದಾದಾಗ ಆರೋಪಿಗಳು ಬಾಗಿಲನ್ನು ಬಲವಾಗಿ ತಳ್ಳಿ ಮನೆಯೊಳಗೆ ನುಗ್ಗಿದ್ದಾರೆ.

ಬಾಗಿಲು ತಳ್ಳಿದ ರಭಸಕ್ಕೆ ವೃದ್ಧೆ ಕೆಳಗೆ ಬಿದ್ದಿದ್ದು, ಅವರು ಬೊಬ್ಬೆ ಹಾಕುತ್ತಿದ್ದಂತೆ ಒಬ್ಬ ಆರೋಪಿ ಅವರ ಬಾಯಿಯನ್ನು ಬಿಗಿಯಾಗಿ ಒತ್ತಿಹಿಡಿದಿದ್ದಾನೆ. ಮತ್ತೊಬ್ಬ ಆರೋಪಿ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಹಾಗೂ ಬಲಗೈಯಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಬಳೆಯನ್ನು ಬಲವಂತವಾಗಿ ಕಸಿದುಕೊಂಡಿದ್ದಾನೆ. ಇನ್ನೂ ಎಡಗೈಯಲ್ಲಿದ್ದ ಬಳೆಯನ್ನೂ ಕಸಿದುಕೊಳ್ಳಲು ಯತ್ನಿಸಿದ್ದು ಸಾಧ್ಯವಾಗದಾಗ ವೃದ್ಧೆಯ ಕೈಗೆ ಗಾಯಗೊಳಿಸಿ, ಮನೆಯ ಬಾಗಿಲನ್ನು ಹೊರಗಿನಿಂದ ಚಿಲಕ ಹಾಕಿ ಪರಾರಿಯಾಗಿದ್ದಾರೆ.

ದರೋಡೆಕೋರರ ಹಲ್ಲೆಯಿಂದ ವೃದ್ದೆಯ ಕೈ ಹಾಗೂ ಮಣಿಗಂಟಿಗೆ ತೀವ್ರ ಗಾಯಗಳಾಗಿದ್ದು, ದೋಚಲ್ಪಟ್ಟ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು 73 ಲಕ್ಷ ಎಂದು ಅಂದಾಜಿಸಲಾಗಿದೆ. ಘಟನೆಯ ಸುಮಾರು ಅರ್ಧ ಗಂಟೆಯ ಬಳಿಕ ಮಗಳು ಪ್ರತಿಭಾ ಮನೆಗೆ ಬಂದಾಗ ವೃದ್ದೆ ಗಾಯಗೊಂಡಿರುವುದು ಮತ್ತು ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *