ಪಡುಬಿದ್ರಿ: ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ₹20 ಲಕ್ಷ ಸಾಲ ವಂಚನೆ ಆರೋಪ: ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಸೇರಿ 7 ಮಂದಿ ವಿರುದ್ಧ ಎಫ್ಐಆರ್ ದಾಖಲು

ಪಡುಬಿದ್ರಿ: ಖಾಸಗಿ ವ್ಯಕ್ತಿಯೊಬ್ಬರ ಜಾಗದ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಅವರ ಗಮನಕ್ಕೆ ತಾರದೆ ₹20 ಲಕ್ಷ ಹೆಚ್ಚುವರಿ ಸಾಲ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಪಡುಬಿದ್ರಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವಸಂತ್ ಬೆರ್ನಾರ್ಡ್ ಸೇರಿದಂತೆ ಸಂಘದ ಅಧಿಕಾರಿಗಳು ಹಾಗೂ ನಿರ್ದೇಶಕರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆಯಂಗಡಿ ನಿವಾಸಿ ನಾಗೇಶ್ ಅವರು 2023ರ ಆಗಸ್ಟ್ 28ರಂದು ತಮ್ಮ ಮದುವೆ ನಿಮಿತ್ತ ಹಳೆಯಂಗಡಿ ಪ್ರಿಯದರ್ಶಿನಿ ಸೊಸೈಟಿಯಲ್ಲಿ ಜಾಗದ ದಾಖಲೆಗಳನ್ನು ಅಡಮಾನವಿಟ್ಟು ₹5 ಲಕ್ಷ ಸಾಲ ಪಡೆದಿದ್ದರು. ಈ ಸಂದರ್ಭದಲ್ಲಿ ಪಡುಬಿದ್ರಿ ಶಾಖೆಯ ಬ್ರಾಂಚ್ ಮ್ಯಾನೇಜರ್ ಪ್ರಜ್ಞಾಶ್ರೀ ಹಾಗೂ ಸಂಘದ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಅವರು ಸಾಲದ ಪ್ರಕ್ರಿಯೆ ಎಂದು ಹೇಳಿ ನಾಗೇಶ್ ಅವರಿಂದ ಹಲವು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಬಳಿಕ ಹೆಚ್ಚುವರಿ ಜಾಗದ ದಾಖಲೆಗಳನ್ನು ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಸರ್ಕಾರದಿಂದ ಮಂಜೂರಾಗಿದ್ದ ಸುಮಾರು 66 ಸೆಂಟ್ಸ್ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಗೇಶ್ ಅವರು ಸಂಘಕ್ಕೆ ನೀಡಿದ್ದರು. ಆದರೆ, ತಮ್ಮ ಗಮನಕ್ಕೆ ತಾರದೆ 2023ರ ಸೆಪ್ಟೆಂಬರ್ 7ರಂದು ತಮ್ಮ ಹೆಸರಿನಲ್ಲಿ ₹20 ಲಕ್ಷ ಹೆಚ್ಚುವರಿ ಸಾಲ ಮಂಜೂರು ಮಾಡಲಾಗಿದೆ ಎಂದು ನಾಗೇಶ್ ಆರೋಪಿಸಿದ್ದಾರೆ.
ಈ ವಿಚಾರ ನಾಗೇಶ್ ಅವರಿಗೆ ಇತ್ತೀಚೆಗೆ ತಿಳಿದುಬಂದಿದ್ದು, 2026ರ ಜೂನ್ 16ರಂದು ಪಡುಬಿದ್ರೆಯಲ್ಲಿ ವಸಂತ್ ಬೆರ್ನಾರ್ಡ್ ಅವರ ಕಾರನ್ನು ತಡೆದು ಪಾಸ್‌ಬುಕ್ ಕುರಿತು ವಿಚಾರಿಸಿದಾಗ ಅವರು ಬೈದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮರುದಿನ, ಜೂನ್ 17ರಂದು ಹಳೆಯಂಗಡಿ ಪ್ರಿಯದರ್ಶಿನಿ ಸೊಸೈಟಿಯಿಂದ ಸಾಲದ ಕಂತು ಪಾವತಿಸುವಂತೆ ನೋಟಿಸ್ ಬಂದಿದ್ದು, ಅದರಲ್ಲಿ ಅಸಲು ₹4.49 ಲಕ್ಷ ಹಾಗೂ ಬಡ್ಡಿ ಸೇರಿ ₹7.97 ಲಕ್ಷ ಪಾವತಿಸಬೇಕೆಂದು ಉಲ್ಲೇಖಿಸಲಾಗಿತ್ತು. ಆದರೆ, ತಮ್ಮ ಹೆಸರಿನಲ್ಲಿ ಹೆಚ್ಚುವರಿಯಾಗಿ ₹20 ಲಕ್ಷ ಸಾಲ ಪಡೆದಿರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾಗೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪಡುಬಿದ್ರಿ ಶಾಖೆಯಿಂದ ಮಾಹಿತಿ ಪಡೆದುಕೊಂಡಾಗ, ನಾಗೇಶ್ ಅವರ ಹೆಸರಿನಲ್ಲಿ ₹20 ಲಕ್ಷ ಸಾಲ ಪಡೆದು, ಅದರಲ್ಲಿ ₹19.10 ಲಕ್ಷವನ್ನು ಅವರ ಗಮನಕ್ಕೆ ತಾರದೆ ಹಳೆಯಂಗಡಿ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ಶೇಖ್ ವಜೀರ್ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಬಳಿಕ ಈ ಹಣವನ್ನು ಪ್ರಮುಖ ಆರೋಪಿ ವಸಂತ್ ಬೆರ್ನಾರ್ಡ್ ಹಾಗೂ ಸೊಸೈಟಿ ನಿರ್ದೇಶಕಿ ಮಿರ್ಜಾ ಅಹಮದ್ ಅವರ ಖಾತೆಗಳಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದಿಂದ ಮಂಜೂರಾಗಿದ್ದ ಸುಮಾರು 66 ಸೆಂಟ್ಸ್ ಜಾಗದ ದಾಖಲೆಗಳನ್ನು ನಾಗೇಶ್ ಅವರ ಗಮನಕ್ಕೆ ತಾರದೆ ಸಹಕಾರ ಸಂಘದಲ್ಲಿ ಅಡಮಾನ ಇರಿಸಿ ₹20 ಲಕ್ಷ ಸಾಲ ಮಂಜೂರು ಮಾಡಲಾಗಿದೆ. ಆದರೆ ಸಾಲದ ಮೊತ್ತವನ್ನು ದೂರುದಾರರಿಗೆ ನೀಡದೆ ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ನಾಗೇಶ್ ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ಆರೋಪಿತರಿಗೆ ತಿಳಿದಿದ್ದರೂ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2026ರಡಿ BNSನ ಕಲಂ 316(2), 318(4), 336(2), 3(5) ಹಾಗೂ SC/ST (POA) Actನ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಪಡುಬಿದ್ರಿ ಶಾಖೆಯ ಬ್ರಾಂಚ್ ಮ್ಯಾನೇಜರ್ ಪ್ರಜ್ಞಾಶ್ರೀ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಪೂಜಾರಿ, ಸಿಬ್ಬಂದಿ ರೇಷ್ಮಾ, ನಿರ್ದೇಶಕಿ ಮಿರ್ಜಾ ಅಹಮದ್, ನಿರ್ದೇಶಕ ಉಮನಾಥ್ ಜೆ. ಶೆಟ್ಟಿಗಾರ್ ಹಾಗೂ ನಿರ್ದೇಶಕಿ ಶೆರಿಲ್ ಲಿಯೋನಾ ಐಮನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
