ಉಡುಪಿ: ಮನೆ ಟೆರಿಸ್ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು – ₹12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳವು

ಉಡುಪಿ: ಮನೆ ಬೀಗ ಹಾಕಿ ಮೈಸೂರಿಗೆ ಹೋಗಿದ್ದ ಶಿಕ್ಷಕಿಯ ಮನೆಯ ಟೆರಿಸ್ ಬಾಗಿಲು ಮೀಟಿ ಒಳಗೆ ನುಗ್ಗಿದ ಕಳ್ಳರು ಚಿನ್ನ,ಬೆಳ್ಳಿ, ನಗದು ಸೇರಿ ಸುಮಾರು 12 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೆ ಕಳ್ಳತನಕ್ಕೆ ಒಳಗಾದ ಮನೆಯ ಮಾಲಕಿ
ಕೊಡಂಕೂರು ಪತ್ತೂರು ಗ್ರಾಮ ಲಲಿತ ನಿವಾಸ ಸಾಯಿಬಾಬಾ ನಗರ ನಿವಾಸಿ ಪ್ರಸ್ತುತ ಇವರು ಮೈಸೂರು ಜಿಲ್ಲೆಯ ಹೂನಸೂರು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿ ಶಶಿರೇಖಾ ಬಿ. (38) ಎಂದು ತಿಳಿದು ಬಂದಿದೆ.
ಶಿಕ್ಷಕಿ ಶಶಿರೇಖಾ ಬಿ. ಅವರು ಬೆಸಿಗೆ ರಜೆಯಲ್ಲಿ ಊರಿಗೆ ಬಂದವರು ಮೇ. 25 ರಂದು
ಮನೆಗೆ ಬೀಗ ಹಾಕಿ ಮೈಸೂರಿಗೆ ಹೋಗಿದ್ದು ಆ. 9 ರಂದು ರಾತ್ರಿ 10:30ರ ಸುಮಾರಿಗೆ ಪತಿ ಶರತ್ ಕುಮಾರ್ ಎಂ.ಬಿ ಮತ್ತು ಮನೆಯವರೊಂದಿಗೆ ಬಂದು ಮನೆಯ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಮನೆಯೊಳಗೆ ಎರಡು ಬೆಡ್ ರೂಂ ಗಳ ಕಾಬೋರ್ಡ್ ಗಳ ಬಾಗಿಲನ್ನು ಮನೆಯಲ್ಲಿದ್ದ ಕೀ ಸಹಾಯದಿಂದ ಬೀಗ ತೆಗೆದು ಮತ್ತು ಬೀರುಗಳ ಬಾಗಿಲು ತೆಗೆದು ಅದರಲ್ಲಿರುವ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಎಳೆದು ಹಾಕಿದ್ದು ಯಾರೋ ಕಳ್ಳರು ಮನೆಯ ಪ್ರವೇಶದ್ವಾರವನ್ನು ಯಾವುದೋ ಅಯುಧದಿಂದ ಮೀಟಿ ತೆರೆಯಲು ಪ್ರಯತ್ನಿಸಿ ನಂತರ ಮನೆಯ ದಕ್ಷಿಣ ಬದಿಯ ಗೋಡೆಯನ್ನು ಹತ್ತಿ ಟೆರಿಸ್ ಮೇಲಿನ ಬಾಗಿಲನ್ನು ಯಾವುದೋ ಅಯುಧದಿಂದ ಮೀಟಿ ತೆರೆದು ಒಳಪ್ರವೇಶಿಸಿ ಬೆಡ್ ರೂಂ ನ ಕಾಬೋರ್ಟ್ ನಲ್ಲಿ ಇಟ್ಟಿದ್ದ 100 ಗ್ರಾಮ ತೂಕದ ಒಂದು ಚಿನ್ನದ ಸರ , 1 ಗ್ರಾಂ ತೂಕದ ಚಿನ್ನದ ಕಾಯಿನ್, ½ ಗ್ರಾಂ ತೂಕದ ಚಿನ್ನದ ಕಾಯಿನ್-1 ಒಟ್ಟು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ.
ಅಲ್ಲದೆ ಇನ್ನೊಂದು ಬೆಡ್ರೂಂನಲ್ಲಿದ್ದ ಬೆಳ್ಳಿಯ ಚೆಂಬು-1 , ಬೆಳ್ಳಿಯ ಹರಿವಾಣ -1, ಬೆಳ್ಳಿಯ ಪಂಚಪಾತ್ರೆ-1, ಬೆಳ್ಳಿಯ ತಟ್ಟೆ -1 ಹಾಗೂ ದೇವರ ಕೋಣೆಯಲ್ಲಿ ಇಟ್ಟಿದ್ದ ಬೆಳ್ಳಿಯ ಹರಸಿನ ಕುಂಕುಮ ಬಟ್ಟಲು, ಬೆಳ್ಳಿಯ ದೀಪಗಳು -2, ಬೀರುವಿನಲ್ಲಿ ಇಟ್ಟಿದ್ದು ಬೆಳ್ಳಿಯ ಕಾಲು ಚೈನ್ 1 ಜೊತೆ ಒಟ್ಟು 1 ಕೆಜಿ 650 ಗ್ರಾಮ ತೂಕದ ಬೆಳ್ಳಿಯ ವಸ್ತುಗಳು ಮತ್ತು ರೂ. 40 ಸಾವಿರ ನಗದನ್ನೂ ಕಳ್ಳರು ದೋಚಿದ್ದಾರೆ.
ಚಿನ್ನ, ಬೆಳ್ಳಿ ಹಾಗೂ ನಗದು ಸೇರಿ ಒಟ್ಟು ಸುಮಾರು ₹12 ಲಕ್ಷ ಮೌಲ್ಯದ ಸೊತ್ತು ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಶಿರೇಖಾ ಬಿ. ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(3), 331(4) ಹಾಗೂ 305ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
