ವಿಶ್ವಕರ್ಮ ಸಮಾಜದ ಅವಹೇಳನ ಆರೋಪ: ಸಾಲಿಗ್ರಾಮದಲ್ಲಿ ಪ್ರತಿಭಟನೆ, ವಿವಾದಿತ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ಸಾಹಿತಿ ಎ.ಎಸ್.ಎನ್. ಹೆಬ್ಬಾರ್

ಕೋಟ, ಅ. 6: ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕುಂದಗನ್ನಡ ಸಂವಾದದಲ್ಲಿ ವಿಶ್ವಕರ್ಮ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾಹಿತಿ ಹಾಗೂ ಹಿರಿಯ ವಕೀಲ ಎ.ಎಸ್.ಎನ್. ಹೆಬ್ಬಾರ್ ವಿರುದ್ಧ ವಿಶ್ವಕರ್ಮ ಸಮಾಜದ ವತಿಯಿಂದ ಮಂಗಳವಾರ ಸಾಲಿಗ್ರಾಮದಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಹೆಬ್ಬಾರ್ ಅವರು ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದರು.
ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಗನ್ನಡ ಸಂವಾದದ ಸಂದರ್ಭದಲ್ಲಿ
ನಾರಾಯಣ ಆಚಾರ್ ಉಲ್ಲೇರ್ ತುಳಿವಿನಲ್ಲಿದ್ದ ವಿಚಾರವನ್ನು ಕುಂದಗನ್ನಡದಲ್ಲಿ “ನಾರಾಯಣ ಆಚಾರ್ ಒಳ್ಳೆಯರ್ ಅವರ ಮಕ್ಕಳ ಅಂಡಿ ಪಿರ್ಕಿಗಳು” ಎಂಬ ವಿಚಾರವನ್ನು ಎ.ಎಸ್ ಎನ್ ಹೆಬ್ಬಾರ್ ಹಾಸ್ಯ ಚಟಾಕಿಯ ಮೂಲಕ ವ್ಯಕ್ತಪಡಿಸಿದ್ದರು. ಈ ಹೇಳಿಕೆಯಿಂದ ವಿಶ್ವಕರ್ಮ ಸಮಾಜದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ, ಸಾಲಿಗ್ರಾಮದ ಚೇಂಪಿ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಆಶ್ರಯದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಯಾವುದೇ ಸಮುದಾಯದ ಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವವರು ತಮ್ಮ ಮಾತಿನ ಪರಿಣಾಮ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾರ್ಕೂರು ಕಾಳಿಕಾಂಬ ದೇಗುಲದ ಮೊದಲನೇ ಮೊಕ್ತೇಸರ ವಡೇರಹೋಬಳಿ ಶ್ರೀಧರ ಆಚಾರ್ಯ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಮಾತನಾಡುವ ಸಂದರ್ಭದಲ್ಲಿ ಬಳಸಿದ ಪದಪ್ರಯೋಗದಿಂದ ವಿಶ್ವಕರ್ಮ ಸಮಾಜಕ್ಕೆ ಅವಹೇಳನವಾಗಿದೆ ಎಂದು ಆರೋಪಿಸಿದರು.
ಯಾರೇ ಆಗಲಿ ಸಮಾಜದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರೆ ಅದನ್ನು ಮೌನವಾಗಿ ಸಹಿಸುವ ಪ್ರಶ್ನೆಯೇ ಇಲ್ಲ. ಅಗತ್ಯವಿದ್ದರೆ ಸಂಘಟಿತರಾಗಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಕಾಳಿಕಾಂಬ ದೇಗುಲದ ಎರಡನೇ ಮೊಕ್ತೇಸರ ಪ್ರವೀಣ್ ಆಚಾರ್ಯ ಬಾರ್ಕೂರು ಮಾತನಾಡಿ, ವಿಶ್ವಕರ್ಮ ಸಮಾಜದ ಕುರಿತು ಹಲವು ವರ್ಷಗಳಿಂದ ಸಾಮಾಜಿಕ ನಿಂದನೆಗಳು ನಡೆಯುತ್ತಿವೆ. ಇಂತಹ ಬೆಳವಣಿಗೆಗಳನ್ನು ಸಹಿಸಿಕೊಂಡು ಮೌನವಾಗಿದ್ದರೆ ಮುಂದೆ ಮತ್ತಷ್ಟು ಅವಮಾನಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಸಮಾಜದ ಸ್ವಾಭಿಮಾನ ಮತ್ತು ಗೌರವದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಬಹಿರಂಗ ಸಭೆಯಲ್ಲಿ ಕ್ಷಮೆಯಾಚಿಸಿದ ಹೆಬ್ಬಾರ್:

ವಿವಾದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಸ್ಪಷ್ಟನೆ ನೀಡಿದ ಹಿರಿಯ ವಕೀಲ ಹಾಗೂ ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ತಮ್ಮ ಮಾತಿನ ಉದ್ದೇಶ ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಅವಮಾನಿಸುವುದಲ್ಲ ಎಂದು ತಿಳಿಸಿ ಬಹಿರಂಗವಾಗಿ ಕ್ಷಮೆಯಾಚಿಸಿದರು.
ಕುಂದಗನ್ನಡದ ಹಾಸ್ಯದ ಮಾತಿನ ಸಂದರ್ಭದಲ್ಲಿ ‘ನಾರಾಯಣ ಆಚಾರ್ ಒಳ್ಳೆಯರ್, ಅವರ ಮಕ್ಕಳ ಅಂಡಿ ಪಿರ್ಕಿಗಳು’ ಎಂಬ ಪದಪ್ರಯೋಗ ಮಾಡಿರುವುದನ್ನು ಒಪ್ಪಿಕೊಂಡ ಅವರು, ವಿಶ್ವಕರ್ಮ ಸಮಾಜದ ಬಗ್ಗೆ ತನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ ಎಂದು ಹೇಳಿದರು.
ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಿದ ಹೆಬ್ಬಾರ್, ಭಾಷಣದ ಸಂದರ್ಭದಲ್ಲಿ ವ್ಯಕ್ತವಾದ ಮಾತುಗಳಿಂದ ಅನಗತ್ಯವಾಗಿ ನೋವು ಅಥವಾ ತಪ್ಪು ಅಭಿಪ್ರಾಯ ಮೂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. “ನನ್ನ ಮಾತಿನಿಂದ ಸಮಾಜಕ್ಕೆ ನೋವಾಗಿದ್ದರೆ ವಿಷಾದಿಸುತ್ತೇನೆ. ಅದಕ್ಕಿಂತಲೂ ಹೆಚ್ಚಿನ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎಂದು ಸಭೆಯಲ್ಲೇ ತಿಳಿಸಿದರು.
ಹೆಚ್ಚಿನ ಸ್ಪಷ್ಟ ಕ್ಷಮೆಯಾಚನೆಗೆ ಆಗ್ರಹ; ಕಾನೂನು ಹೋರಾಟದ ಎಚ್ಚರಿಕೆ
ಈ ನಡುವೆ, ಸಮಾಜಕ್ಕೆ ಆಗಿರುವ ಅವಮಾನಕ್ಕೆ ಇನ್ನಷ್ಟು ಸ್ಪಷ್ಟವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ವಡೇರಹೋಬಳಿ ಶ್ರೀಧರ ಆಚಾರ್ಯ ಎಚ್ಚರಿಕೆ ನೀಡಿದರು.

ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಶ್ವಕರ್ಮ ಸಮಾಜದ ಪ್ರಮುಖರಾದ ಚೇಂಪಿ ಜನಾರ್ಧನ ಆಚಾರ್ಯ, ವೆಂಕಟೇಶ ಆಚಾರ್ಯ, ರಮ್ಯ ರಮೇಶ್ ಆಚಾರ್ಯ, ರಮೇಶ್ ಆಚಾರ್ಯ ಚೇಂಪಿ, ರಮೇಶ್ ಆಚಾರ್ಯ ನೆರೆಂಬಳ್ಳಿ, ದಿನೇಶ್ ಆಚಾರ್ಯ ಮರವಂತೆ, ಕೃಷ್ಣ ಆಚಾರ್ಯ ಕೋಟ, ರವಿಚಂದ್ರ ಆಚಾರ್ಯ ಮಾರಾಳಿ, ಭವಾನಿ ನಾರಾಯಣ ಆಚಾರ್ಯ, ಚಂದ್ರ ಆಚಾರ್ಯ ಗೋಳಿಯಂಗಡಿ, ಸುರೇಶ್ ಆಚಾರ್ಯ ಕಾಪು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಂದ್ರ ಆಚಾರ್ಯ ಕೋಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
