ಅಡಿಕೆ ಬೇಯಿಸುವಾಗ ಹಂಡೆಗೆ ಬಿದ್ದು ವ್ಯಕ್ತಿ ಸಾವು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಿವಮೊಗ್ಗ: ಅಡಿಕೆ ಬೇಯಿಸುವ ವೇಳೆ ಆಕಸ್ಮಿಕವಾಗಿ ಕುದಿಯುತ್ತಿದ್ದ ಚೊಗರಿನ ಹಂಡೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವಡ್ಡಿನಕೊಪ್ಪದ ನಿವಾಸಿ ಜೇನುಕುಮಾರ್ (ಹೆಸರು) ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರುದ್ರಪ್ಪ ಅವರ ಪುತ್ರ ಜೇನುಕುಮಾರ್ ಅವರು ಸೆ.8ರಂದು ಮನೆ ಸಮೀಪದ ಶೆಡ್‌ನಲ್ಲಿ ಅಡಿಕೆ ಬೇಯಿಸುವ ಕೆಲಸದಲ್ಲಿ ತೊಡಗಿದ್ದರು. ಬೆಂದ ಅಡಿಕೆಯನ್ನು ಹಂಡೆಯಿಂದ ಹೊರತೆಗೆದ ಬಳಿಕ ಅದರಲ್ಲಿದ್ದ ಚೊಗರು ತೆಗೆಯಲು ಪಕ್ಕದ ಕಟ್ಟೆಯನ್ನೇರಿದ್ದರು. ಈ ವೇಳೆ ಆಯತಪ್ಪಿ ನೇರವಾಗಿ ಕುದಿಯುತ್ತಿದ್ದ ಚೊಗರಿನ ಹಂಡೆಯೊಳಗೆ ಬಿದ್ದಿದ್ದಾರೆ.
ಘಟನೆ ನಡೆದ ತಕ್ಷಣ ಶೆಡ್‌ನಲ್ಲಿದ್ದ ಮೂವರು ಕಾರ್ಮಿಕರು ಅವರನ್ನು ಹಂಡೆಯಿಂದ ಹೊರಗೆಳೆದಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಜೇನುಕುಮಾರ್ ಅವರು ಹೊರಗೆ ಓಡಿಬಂದು ಶರ್ಟ್ ಕಳಚಿಕೊಂಡಿದ್ದಾರೆ. ಬಳಿಕ ಮತ್ತೆ ಶೆಡ್‌ಗೆ ಮರಳುವಷ್ಟರಲ್ಲಿ ಅವರ ದೇಹದ ಬಹುಭಾಗ ತೀವ್ರವಾಗಿ ಸುಟ್ಟುಹೋಗಿತ್ತು ಎನ್ನಲಾಗಿದೆ.
ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಗಳ ಗಂಭೀರತೆಯಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಮುಂದುವರಿದರೂ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಅಡಿಕೆ ಬೇಯಿಸುವ ಶೆಡ್‌ನಲ್ಲಿ ನಡೆದ ಈ ಭೀಕರ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ದೃಶ್ಯಗಳು ಆಘಾತ ಮೂಡಿಸಿವೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
