ಬೆಳ್ಳಾಲದಲ್ಲಿ ದಲಿತ ದೌರ್ಜನ್ಯ ಹಾಗೂ ಕೊಲೆ ಯತ್ನ ಪ್ರಕರಣ ದಾಖಲು – ಮೂವರ ಬಂಧನ

ಬೆಳ್ಳಾಲದಲ್ಲಿ ದಲಿತ ದೌರ್ಜನ್ಯ ಹಾಗೂ ಕೊಲೆ ಯತ್ನ ಪ್ರಕರಣ ದಾಖಲು – ಮೂವರ ಬಂಧನ

ಕೊಲ್ಲೂರು: ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ನಡೆದ ಜಾತಿ ನಿಂದನೆ ಹಾಗೂ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆಯ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಎರಡೂ ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಪೊಲೀಸರ ಮಾಹಿತಿಯಂತೆ, ಆಗಸ್ಟ್ 6ರಂದು ನೊಂದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸನತ್ ಕುಂದಾಪುರ ಎಂಬಾತ ತನ್ನ ಮನೆಯ ಸಮೀಪ ಬಂದು ಮಹಿಳೆಯ ಮಾನಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ವರ್ತಿಸಿದ್ದಲ್ಲದೆ ಜಾತಿ ನಿಂದನೆ ಮಾಡಿರುವ ಆರೋಪದಡಿ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 51/2026ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಇದೇ ಘಟನೆಯ ಸಂದರ್ಭದಲ್ಲಿ ತನಗೆ ಮಹಿಳೆಯ ಕುಟುಂಬಸ್ಥರು ಮರಕ್ಕೆ ಕಟ್ಟಿ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿರುವುದಾಗಿ ಯುವಕ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 52/2026ರಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎರಡೂ ಪ್ರಕರಣಗಳ ತನಿಖೆ ಮುಂದುವರಿದಿದ್ದು, ವಾಸ್ತವಾಂಶದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಪ್ರೇಮ ಸಂಬಂಧ ಅಥವಾ ಯಾವುದೇ ವೈಯಕ್ತಿಕ ವಿಚಾರವನ್ನು ನೆಪವನ್ನಾಗಿ ಮಾಡಿಕೊಂಡು ಕಾನೂನನ್ನು ಕೈಗೆತ್ತಿಕೊಳ್ಳುವುದು ಹಾಗೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಸಮಿತಿ ಹೇಳಿದೆ.
ಜಾತಿ, ಧರ್ಮ ಅಥವಾ ಸಮುದಾಯದ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಕಾನೂನಿನ ರಕ್ಷಣೆ ದೊರೆಯಬೇಕು. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಈ ಕುರಿತು ಜಯನ್ ಮಲ್ಪೆ, ವಾಸುದೇವ ಮುದೂರು, ಪರಮೇಶ್ವರ ಉಪ್ಪೂರು, ಲಕ್ಷ್ಮಣ ಬೈಂದೂರು ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಸ್ಥಳೀಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *