ಕುಂದಾಪುರ ಗುಂಡಿನ ದಾಳಿ ಪ್ರಕರಣ: ಆರೋಪಿ ಡೆರಿಕ್ ಕ್ರಾಸ್ತಾ ಭಟ್ಕಳದಲ್ಲಿ ಬಂಧನ

ಕುಂದಾಪುರ ಗುಂಡಿನ ದಾಳಿ ಪ್ರಕರಣ: ಆರೋಪಿ ಡೆರಿಕ್ ಕ್ರಾಸ್ತಾ ಭಟ್ಕಳದಲ್ಲಿ ಬಂಧನ


ಉಡುಪಿ: ಕುಂದಾಪುರದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಉಡುಪಿ ಜಿಲ್ಲಾ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕುಂದಾಪುರದ ಚರ್ಚ್ ರಸ್ತೆಯ ನಿವಾಸಿ ಡೆರಿಕ್ ಕ್ರಾಸ್ತಾ ಎಂದು ಗುರುತಿಸಲಾಗಿದ್ದು, ಹತ್ಯೆಗೀಡಾದವರು ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್.
ಪ್ರಾಥಮಿಕ ತನಿಖೆಯ ಪ್ರಕಾರ, ಜುಲೈ 30ರಂದು ರಾತ್ರಿ ಸುಮಾರು 11.45ಕ್ಕೆ ಡೆರಿಕ್ ಕ್ರಾಸ್ತಾ ಅವರು ಐವನ್ ರಿಚರ್ಡ್ ಅವರಿಗೆ ಕರೆ ಮಾಡಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಬಾಕಿ ಹಣದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಮಾತನಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು “ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಜುಲೈ 31ರಂದು ರಾತ್ರಿ ಸುಮಾರು 1.30ಕ್ಕೆ ಡೆರಿಕ್ ತನ್ನ ಲೊಕೇಶನ್ ಅನ್ನು ಐವನ್‌ಗೆ ಕಳುಹಿಸಿದ್ದಾನೆ. ಬಳಿಕ ಚರ್ಚ್ ರಸ್ತೆಯ ಹೋಲಿ ರೋಸಾರಿಯೋ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಯಲ್ಲಿ ಐವನ್ ಕಾರಿನಲ್ಲಿ ಕಾಯುತ್ತಿದ್ದ ವೇಳೆ, ಬೆಳಗಿನ ಜಾವ ಸುಮಾರು 3.15ಕ್ಕೆ ಕಪ್ಪು-ಕೆಂಪು ಬಣ್ಣದ ಥಾರ್ ವಾಹನದಲ್ಲಿ ಸ್ಥಳಕ್ಕೆ ಬಂದ ಡೆರಿಕ್, ಕಾರಿನಿಂದ ಇಳಿದು ತನ್ನ ಬಳಿ ಇದ್ದ ಗನ್‌ನಿಂದ ಐವನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಐವನ್ ರಿಚರ್ಡ್ ಸ್ಥಳದಲ್ಲೇ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಹಣಕಾಸು ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದ ಮನಸ್ತಾಪವೇ ಈ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 67/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 103 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಕಲಂ 3 ಮತ್ತು 25ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ಡೆರಿಕ್ ಕ್ರಾಸ್ತಾನ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಯ ಫಲವಾಗಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಹೇರಬುಡಿಕೆ ಪ್ರದೇಶದಲ್ಲಿ ಅಡಗಿದ್ದ ಡೆರಿಕ್ ಕ್ರಾಸ್ತಾನನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿರಾಂ ಶಂಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *