ಕೌಟುಂಬಿಕ ಕಲಹ: ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಸ್ಪೋಟಿಸಿದ ತಂದೆ: ಅಪ್ಪ,ಮಗಳು ದಾರುಣ ಸಾವು, ಐವರಿಗೆ ಗಂಭೀರ ಗಾಯ!

ಕೌಟುಂಬಿಕ ಕಲಹ: ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಸ್ಪೋಟಿಸಿದ ತಂದೆ: ಅಪ್ಪ,ಮಗಳು ದಾರುಣ ಸಾವು, ಐವರಿಗೆ ಗಂಭೀರ ಗಾಯ!


ಕಲಬುರಗಿ: ಕೌಟುಂಬಿಕ ಕಲಹವೊಂದು ಭೀಕರ ದುರಂತಕ್ಕೆ ಕಾರಣವಾಗಿದ್ದು ತಂದೆ ತನ್ನ ದೇಹಕ್ಕೆ ಸ್ಪೋಟಕ ಕಟ್ಟಿಕೊಂಡು ಸ್ಫೋಟಿಸಿಕೊಂಡ ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಮಕ್ಕಳು ಸೇರಿ ಐದು ಮಂದಿ ಗಂಭೀರ ಗಾಯಗೊಂಡ ಭೀಕರ ಘಟನೆ ಆ.11ರಂದು ಮಂಗಳವಾರ ಬೆಳಿಗ್ಗೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ನಡೆದಿದೆ.

ಮೃತಪಟ್ಟವರನ್ನು ಶಿವಲಾಲ್ ಬಲಿರಾಮ್ ರಾಥೋಡ್ (49) ಮತ್ತು ಅವರ ಮಗಳು ವೀರಾ ಶಿವಲಾಲ್ ರಾಥೋಡ್ (15) ಎಂದು ಗುರುತಿಸಲಾಗಿದೆ.

ಘಟನೆ ವಿವರ:
49 ವರ್ಷದ ಶಿವಲಾಲ್‌ ಮತ್ತು ಪತ್ನಿ ಸವಿತಾ ನಡುವೆ ಸಣ್ಣಪುಟ್ಟ ಕಾರಣಗಳಿಗೆ ಕಳೆದ ಕೆಲವು ದಿನಗಳಿಂದ ಗಲಾಟೆಯಾಗುತ್ತಿತ್ತು. ಇದರಿಂದ ಬೇಸತ್ತ ಪತ್ನಿ ಸವಿತಾ, ತನ್ನ ಮಗಳು ಮತ್ತು ಇಬ್ಬರು ಗಂಡುಮಕ್ಕಳೊಂದಿಗೆ ತಾಂಡಾದಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿದ್ದರು.

ಇಂದು ಬೆಳಿಗ್ಗೆ ಹಠಾತ್ತಾಗಿ ಸಂಬಂಧಿಕರ ಮನೆಗೆ ಅತಿಕ್ರಮವಾಗಿ ನುಗ್ಗಿದ ಶಿವಲಾಲ್, ಪತ್ನಿ ಮತ್ತು ಮಕ್ಕಳನ್ನು ಕೊಲ್ಲುವ ಉದ್ದೇಶದಿಂದ ಕಲ್ಲುಗಣಿಗಾರಿಕೆಗೆ ಬಳಸುವ ಜಿಲೆಟಿನ್/ಡಿಟೊನೇಟರ್ ಸ್ಪೋಟಕವನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು, ಮನೆಯ ಒಳಗಿನಿಂದ ಬಾಗಿಲು ಹಾಕಿ ಸ್ಫೋಟಿಸಿಕೊಂಡಿದ್ದಾನೆ.
ಸ್ಫೋಟದ ತೀವ್ರತೆಗೆ ಇಡೀ ತಾಂಡಾವೇ ನಡುಗಿದ್ದು, ಮನೆಯ ಗೋಡೆ ಹಾಗೂ ನೆಲದ ಮೇಲೆ ಮೃತದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಕ್ಕಪಕ್ಕದ ಮನೆಗಳಿಗೂ ಭಾಗಶಃ ಹಾನಿಯಾಗಿದೆ.

ಈ ಭೀಕರ ಸ್ಫೋಟದಲ್ಲಿ ಪತ್ನಿ ಸವಿತಾ (40), ಮಗ ಪ್ರಕಾಶ್ (19), ಸಂಬಂಧಿ ಸುರೇಖಾ ಚವ್ಹಾಣ್ (30), ಅವರ ಮಗ ವಿವೇಕ್ ಚವ್ಹಾಣ್ (12) ಹಾಗೂ ನಿತೀಶ್ ಗಂಭೀರವಾಗಿ ಗಾಯಗೊಂಡಿದ್ದು, ನೆರೆಮನೆಯ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನೆಲ್ಲ ತಕ್ಷಣವೇ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಆಳಂದ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *