ಕುಂದಾಪುರ: ವೀನುಗಾರಿಕೆ ತೆರಳಿದ್ದ ಬೋಟ್ ಮುಳುಗಡೆ – ಮೀನುಗಾರರ ರಕ್ಷಣೆ

ಕುಂದಾಪುರ: ವೀನುಗಾರಿಕೆ ತೆರಳಿದ್ದ ಬೋಟ್ ಮುಳುಗಡೆ – ಮೀನುಗಾರರ ರಕ್ಷಣೆ


ಕುಂದಾಪುರ: ಮೀನುಗಾರಿಕೆಗೆ ಮಲ್ಪೆ ಬಂದರಿನಿಂದ ಹೊರಟ್ಟಿದ್ದ ಬೋಟೊಂದು ನೀರಲ್ಲಿ ಮುಳುಗಿದ ಘಟನೆ ಮರವಂತೆ ಸಮೀಪದ ಅರಬೀ ಸಮುದ್ರದಲ್ಲಿ ಸಂಭವಿಸಿದೆ. ಬೋಟಿನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಕೋಟ ಕದ್ರಿಕಟ್ಟು ನಿವಾಸಿ ಕೃಷ್ಣ ಪುತ್ರನ್ ಎಂಬವರ ಬೋಟು ಇದಾಗಿದ್ದು, ಆ.12 ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿತ್ತು. ಆ.14ರ ರಾತ್ರಿ ಬೋಟಿನ ತಳಭಾಗಕ್ಕೆ ಏನೋ ವಸ್ತು ತಗಲಿ ಒಳಗೆ ನೀರು ಬರಲಾರಂಭಿಸಿತು. ಬೋಟು ಮುಳುಗುತ್ತಿದ್ದನ್ನು ಕಂಡು ಕೂಡಲೇ ಅಲ್ಲಿಯೇ ಮೀನುಗಾರಿಕೆ ನಡೆಸುತ್ತಿದ್ದ ಬೃಂದಾವನ ಹಾಗೂ ಗುರುದರ್ಶನ್ ಬೋಟಿನವರು ಹತ್ತಿರ ಬಂದು, ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ ಎರಡು ಬೋಟಿನವರ ಸಹಕಾರದಿಂದ ಮುಳುಗುತ್ತಿದ್ದ ಬೊಟನ್ನು ಹಗ್ಗ ಕಟ್ಟಿ, ಎಳೆದುಕೊಂಡು ದಡದತ್ತ ತರಲು ಪ್ರಯತ್ನಿಸಿದರೂ, ಗಂಗೊಳ್ಳಿ ಲೈಟ್ ಹೌಸ್ ಸಮೀಪ ಸುಮಾರು 12 ಮೈಲು ದೂರದಲ್ಲಿ ಅಲೆಗಳ ಅಬ್ಬರಕ್ಕೆ ಹಗ್ಗ ತುಂಡಾಗಿ, ಬೋಟ್ ಮುಳುಗಿದೆ.

2,500 ಲೀ. ಡೀಸೆಲ್, ಜಿಪಿಎಸ್ ಫೈರ್ ಫೈಬರ್ ವಯರ್ ಲೆಸ್ ಪರಿಕರ, ಸುಮಾರು 2.50 ಲಕ್ಷ ರೂ. ಮೌಲ್ಯದ ಮೀನು, ಬಲೆ, ಬೋಟು, ಇನ್ನಿತರ ಸೊತ್ತುಗಳೆಲ್ಲ ಸೇರಿದಂತೆ ಬೋಟು ಸಂಪೂರ್ಣ ಮುಳುಗಡೆಯಾಗಿದ್ದರಿಂದ ಅಂದಾಜು 45 ಲಕ್ಷ ರೂ. ವರೆಗೆ ನಷ್ಟ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *