ಹೆಬ್ರಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ದುರ್ಮರಣ

ಹೆಬ್ರಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆ. 7 ರಂದು ಶುಕ್ರವಾರ ಸಂಜೆ ಹುತ್ತುರ್ಕೆ ಬಳಿ ಸಂಭವಿಸಿದೆ.
ಮೃತರನ್ನು ಹೆಬ್ರಿ ಸಂತೆಕಟ್ಟೆಯ ಸದಾನಂದ ನಾಯಕ್ (55) ಎಂದು ಗುರುತಿಸಲಾಗಿದೆ.
ಕಾರು ಹೆಬ್ರಿಯಿಂದ ಬ್ರಹ್ಮಾವರ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಬೃಹತ್ ಮರ ರಸ್ತೆಗೆ ಉರುಳಿ ಬೀಳುವ ಸಂದರ್ಭ ವಿದ್ಯುತ್ ಕಂಬ ಹಾಗೂ ತಂತಿಗಳೂ ಮರದೊಂದಿಗೆ ಕಾರಿನ ಮೇಲೆ ಬಿದ್ದಿವೆ. ಈ ಪರಿಣಾಮ ಮರ, ವಿದ್ಯುತ್ ಕಂಬ ಹಾಗೂ ತಂತಿಗಳ ನಡುವೆ ಕಾರು ಸಿಲುಕಿಕೊಂಡಿದೆ.
ಇದರಿಂದಾಗಿ ಚಾಲಕ ಸದಾನಂದ ನಾಯಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮರವನ್ನು ಕ್ರೇನ್ ಮೂಲಕ ತೆರವುಗೊಳಿಸಿ, ಮೃತದೇಹವನ್ನು ಹೊರಗಡೆ ತೆಗೆಯಲು ಹರಸಹಾಸ ಪಡಲಾಯಿತು.
ಹೆಬ್ರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
