ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಸಹೋದರ ಆತ್ಮಹತ್ಯೆಗೆ ಶರಣು!

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಸಹೋದರ ಆತ್ಮಹತ್ಯೆಗೆ ಶರಣು!

ಮಂಗಳೂರು: ತಂಗಿಯ ಆತ್ಮಹತ್ಯೆಯಿಂದ ತೀವ್ರವಾಗಿ ನೊಂದಿದ್ದ ಸಹೋದರನೊಬ್ಬ, ಗಲ್ಫ್‌ನಿಂದ ಮಂಗಳೂರಿಗೆ ಮರಳಿದ ಕೆಲವೇ ಗಂಟೆಗಳಲ್ಲಿ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೃತರನ್ನು ಕೇರಳದ ಬೇಕಲ್‌ನ ಪಳ್ಳಿಕ್ಕರ ಮುಕೂಡ್ ನಿವಾಸಿ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್ (24) ಎಂದು ಗುರುತಿಸಲಾಗಿದೆ.
ಅರ್ಜುನ್ ಅವರ ತಂಗಿ ಐಜಾ ಆರ್. ಮಹೇಶ್ ಕಳೆದ ಜೂನ್‌ನಲ್ಲಿ ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದಾಗಿ ಅರ್ಜುನ್ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.

ಭಾನುವಾರ ಗಲ್ಫ್‌ನಿಂದ ವಿಮಾನದ ಮೂಲಕ ಮಂಗಳೂರಿಗೆ ಬಂದಿದ್ದ ಅರ್ಜುನ್ ಬಳಿಕ ನಾಪತ್ತೆಯಾಗಿದ್ದರು. ಮೊಬೈಲ್ ಸ್ವಿಚ್‌ಆಫ್ ಆಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮರವೂರಿನ ಲಾಡ್ಜ್‌ವೊಂದರ ಕೊಠಡಿಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಯ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ. ಒಂದೇ ಕುಟುಂಬದ ಇಬ್ಬರು ಯುವ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Leave a Reply

Your email address will not be published. Required fields are marked *