ಮಣಿಪಾಲ: ಯುವಕರ ಮೇಲೆ ಕ್ರೂರ ಹಲ್ಲೆ ಪ್ರಕರಣ – ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ಬಂಧನ

ಉಡುಪಿ: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಹೆರ್ಗ ಗ್ರಾಮದ ಈಶ್ವರನಗರದ ಜನನಿ ಬಾರ್ & ರೆಸ್ಟೋರೆಂಟ್ ಸಮೀಪ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 23ರಂದು ರಾತ್ರಿ 11.50ರ ಸುಮಾರಿಗೆ ಯಶ್‌ರಾಜ್ ಅವರು ತಮ್ಮ ಸಹೋದರ ಪವನ್ ಕುಮಾರ್ ಹಾಗೂ ಸ್ನೇಹಿತ ಶ್ರೇಯಸ್ ಅವರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ, ಆರೋಪಿಗಳಾದ ಅಕ್ಷಯ್ ಎ., ಪುನೀತ್ ಎಸ್., ಶಮಂತ್ ಕೆ.ಆರ್. ಹಾಗೂ ಯಶವಂತ್ ಬಿ.ಜೆ. ಅವರು ಎರಡು ಕಾರುಗಳಲ್ಲಿ ಬಂದು ಪವನ್ ಕುಮಾರ್ ಅವರನ್ನು ತಡೆದಿದ್ದಾರೆ. ಬಳಿಕ ಯಾವುದೇ ಕಾರಣವಿಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯ ವೇಳೆ ಮೆಟಲ್ ಪಂಚ್‌ನಿಂದ ಪವನ್ ಕುಮಾರ್ ಅವರ ಮುಖಕ್ಕೆ ಹೊಡೆದು ಮೂಗಿಗೆ ಗಂಭೀರ ಗಾಯಪಡಿಸಿದ್ದು, ಯಶ್‌ರಾಜ್ ಹಾಗೂ ಶ್ರೇಯಸ್ ಅವರ ಮೇಲೂ ಹಲ್ಲೆ ನಡೆಸಿ, ಬಟ್ಟೆ ಹರಿದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 120/2026 ದಾಖಲಿಸಿಕೊಂಡು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 352, 351, 115, 118(1), 118(2) ಹಾಗೂ 3(5)ರಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆಯ ವೇಳೆ ಆರೋಪಿಗಳೆಲ್ಲರೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿರುವುದು ತಿಳಿದುಬಂದಿದೆ.
ಪ್ರಕರಣದ ತನಿಖೆಯನ್ನು ಮಣಿಪಾಲ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ನಡೆಸುತ್ತಿದ್ದಾರೆ.
