ಮಂಗಳೂರು: ಖಾಸಗಿ ಕಾಲೇಜಿನಲ್ಲಿ ರ್‍ಯಾಗಿಂಗ್ ಆರೋಪ – ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಮಂಗಳೂರು: ನಗರದ ಶ್ರೀನಿವಾಸ್ ಕಾಲೇಜಿವೊಂದರಲ್ಲಿ ಮತ್ತೆ ರ್‍ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಕೇವಲ ಕಪ್ಪು ಬಣ್ಣದ ಶೂ ಧರಿಸಿದ್ದ ವಿಚಾರಕ್ಕೆ ಇಬ್ಬರು ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಅದೇ ಕಾಲೇಜಿನ ದ್ವಿತೀಯ ವರ್ಷದ 6 ಮಂದಿ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಆರು ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಗುಜ್ಜರಕೆರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಇಬ್ಬರೂ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಕೇರಳ ಮೂಲದ ಆದರ್ಶ ಮತ್ತು ಜಾಸಿನ್ ಮೇಲೆ ದ್ವಿತೀಯ ವರ್ಷದ ಲಾಜೆಸ್ಟಿಕ್ ವಿಭಾಗದ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಪ್ಪು ಶೂ ಹಾಕಿಕೊಂಡು ಬಂದಿದ್ದನ್ನು ನೆಪವನ್ನಾಗಿ ಮಾಡಿಕೊಂಡು ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿ, ಬಳಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡ ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ದ್ವಿತೀಯ ವರ್ಷದ ಲಾಜೆಸ್ಟಿಕ್ ವಿಭಾಗದ ಆರು ಮಂದಿ ವಿದ್ಯಾರ್ಥಿಗಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
